ಆಧಾರ್‌ ಗಡುವು ವಿಸ್ತರಣೆ

ಆಧಾರ್‌ ಗಡುವು ವಿಸ್ತರಣೆ

13 Mar, 2018ಪಿಟಿಐ
ನವದೆಹಲಿ: ಸರ್ಕಾರದ ಕೆಲವು ಯೋಜನೆಗಳು, ಸೌಲಭ್ಯಗಳು, ಬ್ಯಾಂಕ್‌ ಖಾತೆಗಳು ಮತ್ತು ಮೊಬೈಲ್‌ ಸಿಮ್‌ಗೆ ಆಧಾರ್‌ ಜೋಡಣೆಗೆ ನೀಡಲಾಗಿದ್ದ ಮಾರ್ಚ್‌ 31ರ ಗಡುವನ್ನು ಸುಪ್ರೀಂ ಕೋರ್ಟ್‌ ವಿಸ್ತರಿಸಿದೆ. ಆಧಾರ್‌ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಸಂವಿಧಾನ ಪೀಠವು ವಿಚಾರಣೆ ನಡೆಸಿ ತೀರ್ಪು ನೀಡುವವರೆಗೆ ಗಡುವನ್ನು ಮುಂದಕ್ಕೆ ಹಾಕಲಾಗಿದೆ.

ಕಳೆದ ಡಿಸೆಂಬರ್‌ 31ರಂದು ನಡೆದ ವಿಚಾರಣೆಯಲ್ಲಿ ಆಧಾರ್‌ ಸಂಖ್ಯೆ ಜೋಡಣೆಗೆ ಮಾರ್ಚ್‌ 31ರ ಗಡುವು ನೀಡಲಾಗಿತ್ತು. ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠವು ಈಗ ಗಡುವನ್ನು ಅನಿರ್ದಿಷ್ಟಾವಧಿಗೆ ವಿಸ್ತರಿಸಿದೆ.

‘ತತ್ಕಾಲ್‌ ಯೋಜನೆ ಅಡಿ ಪಾಸ್‌ಪೋರ್ಟ್‌ ಪಡೆಯಲು ಆಧಾರ್‌ ಮಾಹಿತಿ ನೀಡುವುದನ್ನು ಕಡ್ಡಾಯ ಮಾಡಲಾಗಿದೆ. ತತ್ಕಾಲ್‌ ಪಾಸ್‌ಪೋರ್ಟ್‌ಗೂ ಆಧಾರ್‌ನಿಂದ ವಿನಾಯಿತಿ ನೀಡಬೇಕು’ ಎಂದು ಹಿರಿಯ ವಕೀಲರಾದ ಅರವಿಂದ ದಾತಾರ್‌ ಮತ್ತು ಶ್ಯಾಮ್‌ ದಿವಾನ್‌ ಕೋರಿದರು. ಈ ಮನವಿಯನ್ನು ಪೀಠ ಒಪ್ಪಿಕೊಂಡಿದೆ.

‘ಪಾಸ್‌ಪೋರ್ಟ್‌ ಪಡೆಯಲು ಇತರ ಗುರುತಿನ ದಾಖಲೆಗಳನ್ನು ನೀಡಿದರೆ ಸಾಕು. ಪಾಸ್‌ಪೋರ್ಟ್‌ ಪಡೆಯುವ ಪ್ರಕ್ರಿಯೆಯನ್ನು ತ್ವರಿತಗೊಳಿಸುವುದಕ್ಕಾಗಿ ಆಧಾರ್‌ ಮಾಹಿತಿ ಕೇಳಲಾಗುತ್ತಿದೆ’ ಎಂದು ಅಟಾರ್ನಿ ಜನರಲ್‌ ವೇಣುಗೋಪಾಲ್‌ ತಿಳಿಸಿದರು.

ಆಧಾರ್‌ ಯೋಜನೆಯಲ್ಲಿ ಇರುವ ಲೋಪಗಳೆಲ್ಲವನ್ನೂ ಸೂಕ್ತ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಸರಿಪಡಿಸಬೇಕು ಎಂದು ಹಿಂದಿನ ವಿಚಾರಣೆ ವೇಳೆಯಲ್ಲಿ ಸಂವಿಧಾನ ಪೀಠವು ಹೇಳಿತ್ತು.

ಆಧಾರ್‌ಗೆ ಸಂಬಂಧಿಸಿ 2009ರಿಂದಲೇ ಮಾಹಿತಿ ಸಂಗ್ರಹಿಸಲು ಆರಂಭಿಸಲಾಗಿದೆ. ಆ ಸಂದರ್ಭದಲ್ಲಿ ಯಾವುದೇ ಕಾನೂನು ಇರಲಿಲ್ಲ. 2016ರಲ್ಲಿ ಆಧಾರ್‌ಗೆ ಸಂಬಂಧಿಸಿ ಕೇಂದ್ರವು ಕಾನೂನು ರೂಪಿಸಿದೆ. ಹಾಗಾಗಿ, 2016ಕ್ಕೆ ಮೊದಲಿನ ಮಾಹಿತಿ ಸಂಗ್ರಹಕ್ಕೆ ಯಾವುದೇ ಕಾನೂನಿನ ಬೆಂಬಲ ಇರಲಿಲ್ಲ. ಈ ಬಗ್ಗೆಯೂ ನ್ಯಾಯಪೀಠ ಗಮನ ಹರಿಸಲಿದೆ.

ಆಧಾರ್‌ ಜೋಡಣೆಗೆ ನಿಗದಿಪಡಿಸಲಾಗಿರುವ ಗಡುವನ್ನು ವಿಸ್ತರಿಸಲು ಸರ್ಕಾರ ಸಿದ್ಧವಿದೆ ಎಂದು ಅಟಾರ್ನಿ ಜನರಲ್‌ ಅವರು ಇದೇ 6ರಂದು ನಡೆದ ವಿಚಾರಣೆ ಸಂದರ್ಭದಲ್ಲಿ ಹೇಳಿದ್ದರು.

**

* ‘ತತ್ಕಾಲ್‌’ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವವರು ಆಧಾರ್‌ ಸಂಖ್ಯೆ ನೀಡುವುದು ಕಡ್ಡಾಯವಲ್ಲ

* ಬ್ಯಾಂಕ್‌ ಖಾತೆಗಳು, ಸಿಮ್‌ಗಳಿಗೆ ಸದ್ಯಕ್ಕೆ ಆಧಾರ್‌ ಜೋಡಣೆ ಬೇಕಿಲ್ಲ

* ಸರ್ಕಾರದ ಸಬ್ಸಿಡಿ ಪ‍ಡೆಯಲು ಆಧಾರ್‌ ಜೋಡಣೆ ಮಾಡಲೇಬೇಕು

**

ಬ್ಯಾಂಕ್‌ ಖಾತೆಗೆ ನೇರ ಸಬ್ಸಿಡಿ ವರ್ಗಾವಣೆಯಾಗುವ ಸೌಲಭ್ಯಗಳಿಗೆ ಆಧಾರ್‌ ಕಡ್ಡಾಯ
ಆಧಾರ್‌ ಕಾಯ್ದೆಯ ಸೆಕ್ಷನ್‌ 7ರ ಅಡಿಯಲ್ಲಿ ಬರುವ ಸೌಲಭ್ಯಗಳಿಗೆ ಆಧಾರ್‌ ನೀಡುವುದು ಕಡ್ಡಾಯ. ಕೇಂದ್ರ ಸರ್ಕಾರ ನೀಡುವ ಸಬ್ಸಿಡಿಗಳು, ಸೇವೆಗಳು ಮತ್ತು ಸೌಲಭ್ಯಗಳು ಈ ಸೆಕ್ಷನ್‌ನಲ್ಲಿ ಬರುತ್ತವೆ. ಹಾಗಾಗಿ ಬ್ಯಾಂಕ್‌ ಖಾತೆಗೆ ನೇರ ಸಬ್ಸಿಡಿ ವರ್ಗಾವಣೆಯಾಗುವ ಸೌಲಭ್ಯಗಳಿಗೆ ಆಧಾರ್‌ ನೀಡುವುದು ಕಡ್ಡಾಯ.

ಪ್ಯಾನ್‌, ಮ್ಯೂಚುವಲ್‌ ಫಂಡ್‌, ವಿಮೆ, ಭವಿಷ್ಯ ನಿಧಿ ಮುಂತಾದವುಗಳಿಗೆ ಆಧಾರ್‌ನಿಂದ ವಿನಾಯಿತಿ ಇದೆಯೇ ಎಂಬುದನ್ನು ಸ್ಪಷ್ಟಪಡಿಸಲಾಗಿಲ್ಲ.

**

‘ಸತ್ತವರಿಗೆ ಪರಿಹಾರ ಕೊಡಿ’

ಪಡಿತರ ವಿತರಣೆ ವ್ಯವಸ್ಥೆಗೆ ಆಧಾರ್‌ ಆಧರಿತ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಆದರೆ, ಈ ಯೋಜನೆಯಲ್ಲಿ ಹಲವು ತೊಡಕುಗಳಿವೆ. ಹೀಗಾಗಿ ಸಾರ್ವಜನಿಕ ವಿತರಣೆ ವ್ಯವಸ್ಥೆ ಮೂಲಕ ವಿತರಿಸುವ ಧಾನ್ಯಗಳು ಸಿಗದೆ ಹಲವು ಜನರು ಮೃತಪಟ್ಟಿದ್ದಾರೆ. ಹೀಗೆ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ಕೊಡಬೇಕು ಎಂದು ಫೆ. 22ರಂದು ನಡೆದ ವಿಚಾರಣೆ ಸಂದರ್ಭದಲ್ಲಿ ನಿವೃತ್ತ ನ್ಯಾಯಮೂರ್ತಿ ಕೆ. ಎಸ್‌. ಪುಟ್ಟಸ್ವಾಮಿ ಹೇಳಿದ್ದರು. ಕರ್ನಾಟಕ ಹೈಕೋರ್ಟ್‌ನಲ್ಲಿ ನ್ಯಾಯ ಮೂರ್ತಿಯಾಗಿದ್ದ ಪುಟ್ಟಸ್ವಾಮಿ ಅವರು ಆಧಾರ್‌ ಯೋಜನೆ ಪ್ರಶ್ನಿಸಿ ಅರ್ಜಿ ಸಲ್ಲಿಸಿದವರಲ್ಲಿ ಪ್ರಮುಖರು.

Post a Comment

0 Comments