ಉಳಿತಾಯ ಖಾತೆ ಶುಲ್ಕ ಇಳಿಕೆ
13 Mar, 2018ಪಿಟಿಐ
ಮುಂಬೈ : ಉಳಿತಾಯ ಖಾತೆಗಳಲ್ಲಿ ತಿಂಗಳ ಕನಿಷ್ಠ ಮೊತ್ತ ಕಾಯ್ದುಕೊಳ್ಳದೇ ಇರುವ ಗ್ರಾಹಕರಿಗೆ ವಿಧಿಸುತ್ತಿರುವ ಶುಲ್ಕವನ್ನು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಶೇ 75 ರವರೆಗೂ ಇಳಿಕೆ ಮಾಡಿದೆ.
ಪರಿಷ್ಕೃತ ಶುಲ್ಕವು ಏಪ್ರಿಲ್ 1 ರಿಂದ ಅನ್ವಯಿಸಲಿದೆ. ಮಹಾನಗರ ಮತ್ತು ಪಟ್ಟಣ ಪ್ರದೇಶದ ಗ್ರಾಹಕರಿಗೆ ವಿಧಿಸುತ್ತಿದ್ದ ಶುಲ್ಕವನ್ನು ₹ 50 ರಿಂದ ₹ 15ಕ್ಕೆ ತಗ್ಗಿಸಲಾಗಿದೆ. ಶೇ 18 ರಷ್ಟು ಸೇವಾ ತೆರಿಗೆ ಪ್ರತ್ಯೇಕವಾಗಿ ಅನ್ವಯವಾಗಲಿದೆ. ಬ್ಯಾಂಕ್‌ನ 25 ಕೋಟಿ ಖಾತೆದಾರರು ಇದರ ಲಾಭ ಪಡೆಯಲಿದ್ದಾರೆ.
ಅರೆಪಟ್ಟಣ ಮತ್ತು ಗ್ರಾಮೀಣ ಪ್ರದೇಶದಲ್ಲಿ ₹ 40 ರಷ್ಟು ಶುಲ್ಕ ಇತ್ತು. ಅದನ್ನು ಕ್ರಮವಾಗಿ ₹ 12 ಮತ್ತು ₹ 10ಕ್ಕೆ ಇಳಿಸಲಾಗಿದೆ ಎಂದು ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ.
‘ಗ್ರಾಹಕರ ಹಿತರಕ್ಷಣೆಗೆ ಆದ್ಯತೆ ನೀಡುವ ಬಗ್ಗೆ ಬ್ಯಾಂಕ್ ಹೆಚ್ಚು ಗಮನ ನೀಡುತ್ತಾ ಬಂದಿದೆ. ಗ್ರಾಹಕರ ನಿರೀಕ್ಷೆಯನ್ನು ಈಡೇರಿಸುವ ನಿಟ್ಟಿನಲ್ಲಿ ನಾವು ಕೈಗೊಳ್ಳುತ್ತಿರುವ ಕ್ರಮಗಳಲ್ಲಿ ಇದೂ ಸಹ ಒಂದು ಪ್ರಮುಖ ನಿರ್ಧಾರವಾಗಿದೆ’ ಎಂದು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಪಿ.ಕೆ. ಗುಪ್ತಾ ಅವರು ತಿಳಿಸಿದ್ದಾರೆ.
‘ನಿಯಮಿತ ಉಳಿತಾಯ ಖಾತೆಯಿಂದ (ರೆಗ್ಯುಲರ್ ಸೇವಿಂಗ್ಸ್ ಅಕೌಂಟ್) ಮೂಲ ಉಳಿತಾಯ ಬ್ಯಾಂಕ್ ಠೇವಣಿ ಖಾತೆ (ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಡೆಪಾಸಿಟ್ ಅಕೌಂಟ್–ಬಿಎಸ್‌ಬಿಡಿಎ) ವರ್ಗಾವಣೆ ಆದರೆ ಯಾವುದೇ ಶುಲ್ಕ ಇರುವುದಿಲ್ಲ. ಗ್ರಾಹಕರು ಯಾವಾಗ ಬೇಕಿದ್ದರೂ ಈ ಸೌಲಭ್ಯಕ್ಕೆ ವರ್ಗಾವಣೆ ಆಗಬಹುದು’ ಎಂದು ಅವರು ಹೇಳದ್ದಾರೆ.
‘ಬಿಎಸ್‌ಬಿಡಿಎ’ಗೆ ಇರುವ ಮಿತಿಗಳು: ಈ ಖಾತೆ ಹೊಂದಲು ಆರ್‌ಬಿಐ ಕೆಲವು ಮಿತಿಗಳನ್ನು ವಿಧಿಸಿದೆ. ಈ ಖಾತೆ ಹೊಂದಿರುವವರು ನಿರ್ದಿಷ್ಟ ಬ್ಯಾಂಕ್‌ನಲ್ಲಿ ಬೇರೆ ಯಾವುದೇ ರೀತಿಯ ಉಳಿತಾಯ ಬ್ಯಾಂಕ್ ಠೇವಣಿ ಖಾತೆ ಹೊಂದುವಂತಿಲ್ಲ. ಹಾಗೊಂದು ವೇಳೆ ಖಾತೆ ಹೊಂದಿದ್ದರೆ, ’ಬಿಎಸ್‌ಬಿಡಿಎ’ ತೆರೆದ 30 ದಿನದ ಒಳಗಾಗಿ ಆ ಖಾತೆಯನ್ನು ಸ್ಥಗಿತಗೊಳಿಸಬೇಕು.
ಈ ಮಿತಿಗಳ ಹೊರತಾಗಿ ಈ ಖಾತೆಯು, ಉಳಿತಾಯ ಖಾತೆಯ ಎಲ್ಲ ಸೌಲಭ್ಯಗಳಿಗೂ ಅರ್ಹವಾಗಿರುತ್ತದೆ. ಎಲ್ಲರಿಗೂ ಲಭ್ಯವಿರುವ ಸಾಮಾನ್ಯ ಬ್ಯಾಂಕ್ ಸೇವೆಯಂತೆಯೇ ಇದನ್ನು ಪರಿಗಣಿಸಲಾಗುವುದು. ಖಾತೆಯಲ್ಲಿ ಕನಿಷ್ಠ ಮೊತ್ತ ಹೊಂದಿರಲೇ ಬೇಕು ಎನ್ನುವ ಅಗತ್ಯ ಇಲ್ಲ. ಬ್ಯಾಂಕ್ ಶಾಖೆ ಮತ್ತು ಎಟಿಎಂಗಳಲ್ಲಿ ಹಣ ಸ್ವೀಕೃತಿ ಮತ್ತು ಪಾವತಿ, ಕೇಂದ್ರ ಅಥವಾ ರಾಜ್ಯ ಸರ್ಕಾರಿ ಸಂಸ್ಥೆಗಳು ಮತ್ತು ಇಲಾಖೆಗಳ ಹಣವನ್ನು ಎಲೆಕ್ಟ್ರಾನಿಕ್ ಪಾವತಿ ಸೌಲಭ್ಯಗಳ ಮೂಲಕ ಅಥವಾ ಚೆಕ್ ರೂಪದಲ್ಲಿ ಪಡೆಯಬಹುದು.
ಒಂದು ತಿಂಗಳಿನಲ್ಲಿ ನಾಲ್ಕು ಬಾರಿ ಮಾತ್ರವೇ ಹಣ ಪಡೆಯಬಹುದು. ಶುಲ್ಕವಿಲ್ಲದೇ ಎಟಿಎಂ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ವಿತರಿಸಲಾಗುವುದು.
₹1,772 ಕೋಟಿ ಸಂಗ್ರಹ
2017–18ನೇ ಆರ್ಥಿಕ ವರ್ಷದ ಏಪ್ರಿಲ್–ನವೆಂಬರ್ ಅವಧಿಯಲ್ಲಿ ಕನಿಷ್ಠ ಮೊತ್ತ ನಿರ್ವಹಣೆ ಮಾಡದೇ ಇರುವ ಖಾತೆಗಳಿಂದ ಬ್ಯಾಂಕ್ ಶುಲ್ಕದ ರೂಪದಲ್ಲಿ ₹ 1,772 ಕೋಟಿ ಸಂಗ್ರಹಿಸಿತ್ತು. 2017ರ ಏಪ್ರಿಲ್ 1 ರಿಂದ ಶುಲ್ಕ ವಿಧಿಸಲು ಆರಂಭಿಸಿತ್ತು.
ಏಪ್ರಿಲ್ - ಸೆಪ್ಟೆಂಬರ್ ಅವಧಿಯಲ್ಲಿ ಬ್ಯಾಂಕ್‍ನ ಲಾಭದ ಮೊತ್ತವಾದ ₹3,586 ಕೋಟಿಯ ಅರ್ಧದಷ್ಟು ಮೊತ್ತ ಶುಲ್ಕ ವಸೂಲಿಯಿಂದಲೇ ಬಂದಿದೆ. ಗ್ರಾಹಕರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದ್ದರಿಂದ ಶುಲ್ಕ ಇಳಿಸುವ ನಿರ್ಧಾರಕ್ಕೆ ಬರಲಾಗಿದೆ.
41.2 ಲಕ್ಷ ಎಸ್‌ಬಿ ಖಾತೆ ಸ್ಥಗಿತ
ಏಪ್ರಿಲ್–ಜನವರಿ ಅವಧಿಯಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳದ 41.2 ಲಕ್ಷ ಉಳಿತಾಯ ಖಾತೆಗಳನ್ನು ಸ್ಥಗಿತಗೊಳಿಸಿರುವುದಾಗಿ ಎಸ್‌ಬಿಐ ತಿಳಿಸಿದೆ.
ಮಾಹಿತಿ ಹಕ್ಕು ಕಾಯ್ದೆಯಡಿ ಮಧ್ಯಪ್ರದೇಶದ ಚಂದ್ರ ಶೇಖರ ಗೌಡ ಎಂಬುವವರು ಕೇಳಿರುವ ಪ್ರಶ್ನೆಗೆ ಬ್ಯಾಂಕ್ ಈ ಮಾಹಿತಿ ನೀಡಿದೆ.
**
ಗ್ರಾಹಕರು ನೀಡಿರುವ ಪ್ರತಿಕ್ರಿಯೆ ಪರಿಗಣಿಸಿ ಶುಲ್ಕದಲ್ಲಿ ಇಳಿಕೆ ಮಾಡಲಾಗಿದೆ
– ಪಿ.ಕೆ. ಗುಪ್ತಾ, ಎಸ್‌ಬಿಐ ವ್ಯವಸ್ಥಾಪಕ ನಿರ್ದೇಶಕ
0 Comments