ಪರಿಸರ ಉಳಿಕೆಗಾಗಿ ಅನಂತ್ ಕುಮಾರ್ ಅವರಿಂದ ಇಕೋ ಚೇತನ

ಪರಿಸರ ಉಳಿಕೆಗಾಗಿ ಅನಂತ್ ಕುಮಾರ್ ಅವರಿಂದ ಇಕೋ ಚೇತನ
24 March 2018, 11:43 am
ಬೆಂಗಳೂರು, ಮಾರ್ಚ್ 24 : ಪರಿಸರದ ಉಳಿಕೆಗಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸಿರುವ 'ಅದಮ್ಯ ಚೇತನ' ಸಂಸ್ಥೆ, ಮಾರ್ಚ್ 25ರಂದು ಭಾನುವಾರ 'ಇಕೋ ಚೇತನ' ಹಸಿರು ಜೀವನಶೈಲಿ ವಸ್ತು ಪ್ರದರ್ಶನ, ಮಾರಾಟ ಮತ್ತು ಕಾರ್ಯಾಗಾರವನ್ನು ಹಮ್ಮಿಕೊಂಡಿದೆ.

ಹೆಚ್ಚುತ್ತಿರುವ ತಾಪಮಾನ, ಕುಗ್ಗುತ್ತಿರುವ ಜಲಮಟ್ಟ, ಕಡಿಮೆಯಾಗುತ್ತಿರುವ ಹಸಿರು ಹೊದಿಕೆ-ಜೀವ ವೈವಿಧ್ಯ, ಬೆಳೆಯುತ್ತಿರುವ ರೋಗರುಜಿನಗಳು, ವಾಯುಮಾಲಿನ್ಯ ಇವೆಲ್ಲಕ್ಕೂ ಉತ್ತರ ನಮ್ಮಲ್ಲಿಯೇ ಇದೆ. ಈ ಸಮಸ್ಯೆಯ ಕಾರಣವನ್ನು ತಿಳಿದುಕೊಳ್ಳಬೇಕಾಗಿದೆ, ನಮ್ಮ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗಿದೆ. ಇಕೋ ಚೇತನವು ಈ ದಿಸೆಯಲ್ಲಿ ದಿನನಿತ್ಯದ ವಸ್ತುಗಳನ್ನು ಒದಗಿಸುವ, ಕಾರ್ಯಾಗಾರ ಹಾಗೂ ಪ್ರದರ್ಶನಗಳ ಮೂಲಕ ಮಾಹಿತಿ ನೀಡಲು ವೇದಿಕೆ ಕಲ್ಪಿಸಿದೆ.

ಇದು ಜಯನಗರದ ಯಡಿಯೂರುನಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ 'ಇಕೋ ಚೇತನ' ಕಾರ್ಯಕ್ರಮ ಬೆಳಿಗ್ಗೆ 9.30ರಿಂದ ರಾತ್ರಿ 8ರವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ಕೆಳಗಿನ ಕಾರ್ಯಾಗಾರಗಳನ್ನು ನಡೆಸಲಾಗುವುದು.


* ಸಿರಿಧಾನ್ಯಗಳ ಮಹತ್ವ ಡಾ. ಖಾದರ್‌ರವರಿಂದ (ಸಮಯ 10).

* ತಾರಸಿ ತೋಟ (12.30 ಮತ್ತು 3.30) : ಬೀಜಗಳು ಮತ್ತು ಸಸಿಗಳು, ಕುಂಡಗಳು, ನೀರು ಮತ್ತು ಪೋಷಕಾಂಶಗಳು, ಗಿಡಗಳ ಸಂರಕ್ಷಣೆ.

* ಶೂನ್ಯ ತ್ಯಾಜ್ಯ - ಮನೆಯಲ್ಲೇ ಗೊಬ್ಬರ ತಯಾರಿಕೆ (1.30 ಮತ್ತು 4.30) : ತ್ಯಾಜ್ಯ ವಿಂಗಡಣೆ, ಕಸದಿಂದ ರಸ, ಗೊಬ್ಬರ ತಯಾರಿಕೆ, 3R(reduce-reuse-recycle), ಖರೀದಿಯ ನಿರ್ವಹಣೆ, ವಸ್ತುಗಳ ಜೀವನ ಚಕ್ರ

* ಪಳೆಯುಳಿಕೆ ರಹಿತ ಇಂಧನ (2.30 ಮತ್ತು 5.30) : ಬಯೋ ಗ್ಯಾಸ್, ವಿದ್ಯುತ್, ಬ್ರಿಕೆಟ್ಸ್, ಸೌರ ಶಕ್ತಿ

ಅದಮ್ಯ ಚೇತನದ ಕುರಿತು

ಅದಮ್ಯ ಚೇತನ ಸಂಸ್ಥೆಯು 1997ರಲ್ಲಿ ಅನಂತಕುಮಾರ್‌ರವರ ತಾಯಿಯವರಾದ ಶ್ರೀಮತಿ ಗಿರಿಜಾ ಶಾಸ್ತ್ರಿಯವರ ಸ್ಮರಣಾರ್ಥ ಸ್ಥಾಪಿತವಾಗಿ ಅನ್ನ-ಅಕ್ಷರ - ಆರೋಗ್ಯ ಕ್ಷೇತ್ರಗಳಲ್ಲಿ ವಿವಿಧ ಪ್ರಕಲ್ಪಗಳ ಮೂಲಕ ಹಲವಾರು ಸಾಮಾಜಿಕ ಕಾರ್ಯಗಳನ್ನು ನಿರ್ವಹಿಸುತ್ತಾ ಬರುತ್ತಿದೆ.

ಅದಮ್ಯ ಚೇತನದ ಪ್ರಧಾನ ಪೋಷಕರು, ಮಾನ್ಯ ಕೇಂದ್ರ ಸಚಿವರು ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದರೂ ಆದ ಅನಂತಕುಮಾರ್‌ರವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಸಂಸ್ಥೆಯ 4 ಅಡುಗೆ ಕೇಂದ್ರಗಳಿಂದ (ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಕಲ್ಬುರ್ಗಿ ಮತ್ತು ಜೋಧ್‌ಪುರ-ರಾಜಸ್ಥಾನ) ಪ್ರತಿದಿನ ಸರಿ ಸುಮಾರು 2 ಲಕ್ಷ ಮಕ್ಕಳಿಗೆ ಮಧ್ಯಾಹ್ನದ ರುಚಿ-ಶುಚಿಯಾದ ಬಿಸಿಯೂಟ ನೀಡಲಾಗುತ್ತಿದೆ.

ಈ ತನಕ 43 ಕೋಟಿ ಬಿಸಿಯೂಟ ನೀಡಿದ ಹಿರಿಮೆ ಅದಮ್ಯ ಚೇತನ ಸಂಸ್ಥೆಯದ್ದು. ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಅದಮ್ಯ ಚೇತನ ಸಂಸ್ಥೆಯು ಅನೇಕ ಪ್ರಕಲ್ಪಗಳನ್ನು ಕೈಗೆತ್ತಿಕೊಂಡಿದೆ. ಪ್ರಧಾನ ಪೋಷಕರಾದ ಅನಂತಕುಮಾರ್‌ರವರ ಸಾರಥ್ಯದಲ್ಲಿ ಅದಮ್ಯ ಚೇತನ ಸಂಸ್ಥೆಯು ಹಸಿರು ಜೀವನ ಶೈಲಿಯ ಪ್ರಾಮುಖ್ಯತೆಯನ್ನು ಸಾರುವಲ್ಲಿ ಮುಂದಾಳತ್ವ ವಹಿಸಿದೆ.

ಶೂನ್ಯ ತ್ಯಾಜ್ಯ ಅಡುಗೆಮನೆ : ಬೆಂಗಳೂರಿನ ಅದಮ್ಯ ಚೇತನದ ಅಡುಗೆಮನೆಯು ಶೂನ್ಯ ತ್ಯಾಜ್ಯ ಅಡುಗೆಮನೆಯಾಗಿದೆ. ಪ್ರತಿದಿನ ಸರಾಸರಿ 500 ಕಿ.ಗ್ರಾಂ. ಕಸದಿಂದ ಶೂನ್ಯ ಕಸದೆಡೆಗೆ ಅಡುಗೆಮನೆಯನ್ನು ಪರಿವರ್ತಿಸಲಾಗಿದೆ. ಉತ್ಪಾದನೆಯಾದ ಹಸಿ ತ್ಯಾಜ್ಯವನ್ನು ಗೊಬ್ಬರ ಹಾಗೂ ಅಡುಗೆ ಅನಿಲವನ್ನಾಗಿ ಪರಿವರ್ತಿಸಲಾಗುತ್ತದೆ. ಅಕ್ಕಿ ತೊಳೆದ ಮತ್ತಿತರ ನೀರನ್ನು ಗಿಡಗಳಿಗೆ ನೀರೆರಯಲು ಉಪಯೋಗಿಸಲಾಗುತ್ತಿದೆ. ಕಳೆದ ಹಲವಾರು ವರ್ಷಗಳಿಂದ ಯಾವುದೇ ಕಸವನ್ನು ಪುರಸಭೆಯ ಕಸ ಸಂಗ್ರಹಕಾರರಿಗೆ ನೀಡಲಾಗಿಲ್ಲ.

ಪಳೆಯುಳಿಕೆ ರಹಿತ ಇಂಧನ ಬಳಕೆ : ಬೆಂಗಳೂರಿನ ಅದಮ್ಯ ಚೇತನ ಅಡುಗೆಮನೆಯು ಸಂಪೂರ್ಣವಾಗಿ ಪಳೆಯುಳಿಕೆ ರಹಿತ ಇಂಧನದಿಂದ ಕಾಯನಿರ್ವಹಿಸುತ್ತಿದೆ. ಅಡುಗೆ ಅನಿಲ(LPG), ಡೀಸೆಲ್ ನಂತಹ ಇಂಧನಗಳಿಂದ ಬ್ರಿಕೆಟ್ ನಂತಹ ಜೈವಿಕ ಇಂಧನಕ್ಕೆ ಬದಲಾಯಿಸಿಕೊಳ್ಳಲಾಗಿದೆ. ಈ ಬದಲಾವಣೆಯಿಂದ ವಾರ್ಷಿಕ ಸರಾಸರಿ 7500 ಅಡುಗೆ ಅನಿಲ(LPG) ಸಿಲಿಂಡರ್‌ಗಳ ಬಳಕೆಯನ್ನು ನಿಲ್ಲಿಸಲಾಗಿದೆ.

ಪ್ಲೇಟ್ ಬ್ಯಾಂಕ್ : ಬಳಸಿ ಎಸೆಯುವ ತಟ್ಟೆ, ಲೋಟಗಳಿಂದ ವಾತಾವರಣದ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ತಡೆಯುವ ಉದ್ದೇಶದಿಂದ ಅದಮ್ಯ ಚೇತನ ಸಂಸ್ಥೆಯು ಪ್ಲೇಟ್ ಬ್ಯಾಂಕ್ ಎಂಬ ವಿಶೇಷ ಯೋಜನೆಯನ್ನು ಹೊರತಂದಿದೆ. ನಮ್ಮಲ್ಲಿರುವ 10,000ಕ್ಕೂ ಹೆಚ್ಚು ಸ್ಟೀಲ್ ತಟ್ಟೆ, ಲೋಟ, ಚಮಚಗಳ ಬಳಕೆಯನ್ನು ಪ್ರಾರಂಭಿಸಲಾಗಿದೆ. ಅದಮ್ಯ ಚೇತನದ ಕಾರ್ಯಕ್ರಮಗಳಿಗಲ್ಲದೇ ಮದುವೆ ಮತ್ತಿತರ ಸಾರ್ವಜನಿಕ ಸಮಾರಂಭಗಳಿಗೂ ಬಳಸಲು ನೀಡಲಾಗುತ್ತಿದೆ. ಪರಿಣಾಮವಾಗಿ ಭಾರಿ ಪ್ರಮಾಣದ ಕಸದ ಉತ್ಪಾದನೆಯನ್ನು ತಡೆಯುವಲ್ಲಿ ಸಹಕಾರಿಯಾಗಿದೆ.

ಹಸಿರು ಬೆಂಗಳೂರು 1:1 : ಅನಂತಕುಮಾರ್ ರವರ ಪರಿಸರ ಕಾಳಜಿ ನಮ್ಮನ್ನು ಒಂದು ಕೋಟಿ ಸಸಿ ನೆಡಲು ಪ್ರೇರೇಪಿಸಿದೆ. IISc ಸಂಶೋಧನೆಯ ಪ್ರಕಾರ ಪ್ರತಿಯೊಬ್ಬ ಮನುಷ್ಯನಿಗೆ ಉಸಿರಾಡಲು ವರ್ಷಕ್ಕೆ 700 ಕೆ.ಜಿ ಆಮ್ಲಜನಕದ ಅವಶ್ಯಕತೆಯಿರುತ್ತದೆ. ಒಬ್ಬ ಮನುಷ್ಯನಿಗೆ ವರ್ಷಕ್ಕೆ ಬೇಕಾಗುವ ಆಮ್ಲಜನಕವು 7 ಮರಗಳಿಂದ ಲಭಿಸುತ್ತದೆ. ಆದರೆ ಬೆಂಗಳೂರಿನ ಈಗಿನ ಪರಿಸ್ಥಿತಿಯು ಇದಕ್ಕೆ ತದ್ವಿರುದ್ಧವಾಗಿದೆ. ಈ ಪರಿಸ್ಥಿತಿಯನ್ನು ಸರಿಪಡಿಸಲು ಒಬ್ಬರಿಗೆ ಒಂದು ಮರ ನೆಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.

source: oneindia.com


Post a Comment

0 Comments