ಭಾರತೀಯರಿಗೆ ನೆಮ್ಮದಿ ಗಗನ ಕುಸುಮ

ಭಾರತೀಯರಿಗೆ ನೆಮ್ಮದಿ ಗಗನ ಕುಸುಮ

28 Mar, 2018
ವಿಶ್ವ ನೆಮ್ಮದಿ ರ‍್ಯಾಂಕಿಂಗ್‌ನಲ್ಲಿ ಭಾರತವು, ತನ್ನ ನೆರೆಯ ದೇಶಗಳಿಗಿಂತ ತೀರಾ ಹಿಂದೆ ಇದೆ. ಜಗತ್ತಿನಲ್ಲಿ ಫಿನ್‌ಲೆಂಡ್‌ ಅತ್ಯಂತ ನೆಮ್ಮದಿಯುತ ದೇಶವೆನಿಸಿದ್ದು, ಮೊದಲ ರ‍್ಯಾಂಕ್ ಪಡೆದಿದೆ. ಬುರುಂಡಿ 156ನೇ ರ‍್ಯಾಂಕ್‌ ಪಡೆದಿದ್ದು, ಅತ್ಯಂತ ಕಡಿಮೆ ನೆಮ್ಮದಿ ಇರುವ ದೇಶ ಎನಿಸಿದೆ. ವಿಶ್ವಸಂಸ್ಥೆಯ ‘ಸಸ್ಟೇನೆಬಲ್‌ ಡೆವಲಪ್‌ಮೆಂಟ್ ಸಲ್ಯೂಷನ್ಸ್ ನೆಟ್‌ವರ್ಕ್’ ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಮಾಹಿತಿ ಇದೆ.

ಮಾನದಂಡಗಳು
‘ಐದು ಮಾನದಂಡಗಳನ್ನು ಪರಿಶೀಲಿಸಿ ಈ ಅಧ್ಯಯನ ನಡೆಸಲಾಗಿದೆ. ಆ ಮಾನದಂಡಗಳಿಗೆ ಸಂಬಂಧಿಸಿದಂತೆ ಆಯಾ ದೇಶಗಳ ಸರ್ಕಾರಗಳು ಬಿಡುಗಡೆ ಮಾಡಿರುವ ವರದಿಗಳು ಮತ್ತು ವಿಶ್ವಸಂಸ್ಥೆಯ ವರದಿಗಳನ್ನು ಪರಿಶೀಲಿಸಿ ಹಾಗೂ ಸಮೀಕ್ಷೆಗಳನ್ನು ನಡೆಸಿ ಈ ರ‍್ಯಾಂಕಿಂಗ್ ಪಟ್ಟಿ ಸಿದ್ಧಪಡಿಸಲಾಗಿದೆ’ ಎಂದು ವರದಿಯಲ್ಲಿ ವಿವರಿಸಲಾಗಿದೆ

ಜಿಡಿಪಿ
ಆಯಾ ದೇಶಗಳ ಒಟ್ಟು ರಾಷ್ಟ್ರೀಯ ಉತ್ಪನ್ನವನ್ನು (ಜಿಡಿಪಿ) ಲೆಕ್ಕಹಾಕಿ, ಆಯಾ ದೇಶದ ಜನರ ಕೊಳ್ಳುವ ಶಕ್ತಿಯನ್ನು ಅಂದಾಜು ಮಾಡಲಾಗಿದೆ. ಜನರ ಕೊಳ್ಳುವ ಶಕ್ತಿ ಹೆಚ್ಚಿದ್ದಷ್ಟೂ ಅಲ್ಲಿ ನೆಮ್ಮದಿ ಹೆಚ್ಚು ಎಂದು ಪರಿಗಣಿಸಲಾಗಿದೆ

ಆರೋಗ್ಯಕರ ಜೀವಿತಾವಧಿ ಅಂದಾಜು
ಒಂದು ದೇಶದ ಜನರ ಸರಾಸರಿ ಜೀವಿತಾವಧಿಯನ್ನು ಇದಕ್ಕೆ ಪರಿಗಣಿಸಲಾಗುತ್ತದೆ. ಜನರ ಆರೋಗ್ಯ ಚೆನ್ನಾಗಿದ್ದಲ್ಲಿ, ಜೀವಾತಾವಧಿ ಹೆಚ್ಚಿರುತ್ತದೆ, ಜತೆಗೆ ನೆಮ್ಮದಿಯೂ ಹೆಚ್ಚು. ವಿಶ್ವಸಂಸ್ಥೆಯ ವರದಿಯನ್ನು ಆಧಾರವಾಗಿಟ್ಟುಕೊಂಡು ಇದನ್ನು ಲೆಕ್ಕ ಹಾಕಲಾಗಿದೆ

ಸಾಮಾಜಿಕ ಬೆಂಬಲ
ಕಷ್ಟಕಾಲದಲ್ಲಿ ನೆರೆಹೊರೆಯವರು, ಸ್ನೇಹಿತರು ಮತ್ತು ಸಂಬಂಧಿಕರಿಂದ ದೊರೆಯುವ ಯಾವುದೇ ರೀತಿಯ ನೆರವನ್ನು ಇಲ್ಲಿ ಬೆಂಬಲ ಎಂದು ಪರಿಗಣಿಸಲಾಗಿದೆ. ಸಾಮಾಜಿಕ ನೆರವು ಅರ್ಥಾತ್ ಬೆಂಬಲದ ಪ್ರಮಾಣ ಹೆಚ್ಚಿದ್ದರೆ, ನೆಮ್ಮದಿ ಹೆಚ್ಚಾಗಿಯೇ ಇರುತ್ತದೆ. ಇದನ್ನು ಕಂಡುಕೊಳ್ಳಲು ಸಮೀಕ್ಷೆ ನಡೆಸಲಾಗಿತ್ತು

ಸ್ವಾತಂತ್ರ್ಯ
ವ್ಯಕ್ತಿಯೊಬ್ಬ ತನ್ನಿಚ್ಛೆಯ ಜೀವನವನ್ನು ಆಯ್ಕೆ ಮಾಡಿಕೊಳ್ಳಲು ಇರುವ ಸ್ವಾತಂತ್ರ್ಯ. ಅಂದರೆ ಓದು, ಉದ್ಯೋಗ, ಆಹಾರ, ವಿವಾಹ ಮತ್ತಿತರ ವಿಷಯಗಳಲ್ಲಿ ಇರುವ ಆಯ್ಕೆಯ ಸ್ವಾತಂತ್ರ್ಯ. ಸಮೀಕ್ಷೆ ನಡೆಸಿ ಇದನ್ನು ಕಂಡುಕೊಳ್ಳಲಾಗಿತ್ತು

ಭ್ರಷ್ಟಾಚಾರದ ಗ್ರಹಿಕೆ
ತಮ್ಮ ದೇಶದಲ್ಲಿ ಭ್ರಷ್ಟಾಚಾರವಿದೆ ಎಂಬ ಜನರ ಭಾವನೆಯನ್ನು ಲೆಕ್ಕಹಾಕಿ ಇದನ್ನು ನಿರ್ಧರಿಸಲಾಗುತ್ತದೆ. ತಮ್ಮ ದೇಶದಲ್ಲಿ ಭ್ರಷ್ಟಾಚಾರ ಇದೆ ಎಂದು ಹೆಚ್ಚು ಜನರು ಭಾವಿಸಿದಷ್ಟೂ ನೆಮ್ಮದಿಯ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಆ ದೇಶ ಕುಸಿಯುತ್ತದೆ. ಸಮೀಕ್ಷೆಯ ಮೂಲಕ ಇದನ್ನು ಕಂಡುಕೊಳ್ಳಲಾಗಿದೆ.


Post a Comment

0 Comments