ಮೂಡುಬಿದಿರೆ ತಾಲೂಕಾಗಿ ಅಧಿಕೃತ ಘೋಷಣೆ

ಮೂಡುಬಿದಿರೆ ತಾಲೂಕಾಗಿ ಅಧಿಕೃತ ಘೋಷಣೆ

ವಾರ್ತಾ ಭಾರತಿ : 17 Mar, 2018

ಮೂಡುಬಿದಿರೆ, ಮಾ.17: ಮೂಡುಬಿದಿರೆಗೆ ಈಗ ತಾಲೂಕಿನ ಸೌಭಾಗ್ಯ. 1910-12ರ ಅವಧಿಯಲ್ಲಿ ತಾಲೂಕಾಗಿದ್ದ ಮೂಡುಬಿದಿರೆ ಶತಮಾನದ ಬಳಿಕ ಮತ್ತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಾಲೂಕು ಸ್ಥಾನಮಾನಕ್ಕೇರಿದೆ. ರಾಜ್ಯದಲ್ಲಿ 2017ರ ಬಜೆಟ್ ಹೊಸ ತಾಲೂಕುಗಳ ಘೋಷಣೆಗೆ ಸಂಬಂಧಿಸಿದಂತೆ ಇದೀಗ ರಾಜ್ಯ ಸರ್ಕಾರದ ರಾಜ್ಯಪತ್ರದಲ್ಲಿ ಅಧಿಸೂಚನೆ ಪ್ರಕಟವಾಗಿದ್ದು 2018ರ ಜನವರಿ 11ರಿಂದ ಅನ್ವಯವಾಗುವಂತೆ 'ಮೂಡುಬಿದಿರೆ ತಾಲೂಕು' ಘೋಷಣೆಯಾಗಿದೆ. 

ಹೊಸ ತಾಲೂಕು ರಚನೆಯ ಪ್ರಕ್ರಿಯೆಯ ಅಂಗವಾಗಿ ಕಳೆದ 2017ರ ಡಿ1ರ ಕರಡು ಅಧಿಸೂಚನೆಯನ್ನು ಡಿ7ರ ರಾಜ್ಯಪತ್ರದಲ್ಲಿ  ಸಾರ್ವಜನಿಕ ಸಲಹೆ, ಆಕ್ಷೇಪಗಳಿಗಾಗಿ ಪ್ರಕಟಿಸಲಾಗಿತ್ತು. ಇದೀಗ 2018ರ ಜನವರಿ 11ರ ಕರ್ನಾಟಕ ರಾಜ್ಯ ಪತ್ರ, ವಿಶೇಷ ರಾಜ್ಯ ಪತ್ರಿಕೆ ಸಂಖ್ಯೆ 56ರ (ಭಾಗ 4ಎ)ರಲ್ಲಿ ಮೂಡುಬಿದಿರೆ ತಾಲೂಕು ರಚನೆಯ ವಿವರಗಳನ್ನು ನೀಡಲಾಗಿದೆ. ಮೂಡುಬಿದಿರೆ ಹೊಸ ತಾಲೂಕು ಮೂಡುಬಿದಿರೆ ಹೋಬಳಿಯ ಎಲ್ಲ 28 ಗ್ರಾಮಗಳನ್ನು ಒಳಗೊಂಡಿದೆ. ಮೂಡುಬಿದಿರೆ ತಾಲೂಕಿಗೆ ಪೂರ್ವದಲ್ಲಿ ಬೆಳ್ತಂಗಡಿ ತಾಲೂಕು, ಪಶ್ಚಿಮದಲ್ಲಿ ಉಡುಪಿ ಜಿಲ್ಲೆ, ಪಶ್ಚಿಮ ಮತ್ತು ದಕ್ಷಿಣದಲ್ಲಿ ಮಂಗಳೂರು ತಾಲೂಕಿನ ಗಡಿಭಾಗಗಳು ಗಡಿಗಳಾಗಿರುತ್ತವೆ.   

ನಡೆದು ಬಂದ ದಾರಿ

ಬ್ರಿಟಿಷ್ ಆಡಳಿತದ ದಿನಗಳಲ್ಲಿ 1910ರಿಂದ 1912 ರವರೆಗೆ 68 ಗ್ರಾಮಗಳನ್ನೊಳಗೊಂಡ ತಾಲೂಕಾಗಿದ್ದ ಮೂಡುಬಿದಿರೆ ಮುಂದೆ ರಾಜಕೀಯ ಕಾರಣಕ್ಕಾಗಿ 1913ರಲ್ಲಿ ಕಾರ್ಕಳ ತಾಲೂಕಿನೊಂದಿಗೆ ವಿಲೀನವಾಗಿ ಬರೋಬ್ಬರಿ ನೂರು ವರ್ಷಗಳೇ ಸಂದಿವೆ.  ಅಲ್ಲಿಂದ ಈ ವರೆಗೆ  1973ರಲ್ಲಿ ವಾಸುದೇವ ರಾವ್ ಸಮಿತಿ, 1984ರಲ್ಲಿ ಹುಂಡೇಕರ್ ಸಮಿತಿ, 1986ರಲ್ಲಿ ಗದ್ದೀಗೌಡರ್, 2007ರಲ್ಲಿ ಎಂ.ಬಿ.ಪ್ರಕಾಶ್ ಅವರ ನೇತೃತ್ವದ ಕಮಿಟಿಗಳು  ಮೂಡುಬಿದಿರೆ ತಾಲೂಕಾಗಲಿ ಎನ್ನುವ ಶಿಫಾರಸಿನ ವರದಿ ಕೊಟ್ಟಿದ್ದವು. ಮಾಜಿ ಶಾಸಕ ದಿ. ಶಿರ್ತಾಡಿ ಧರ್ಮ ಸಾಮ್ರಾಜ್ಯ, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಸಹಿತ ಹಾಲಿ ಶಾಸಕ ಕೆ. ಅಭಯಚಂದ್ರ ಜೈನ್ ಮೊದಲಾದವರ ಪರಿಶ್ರಮದಿಂದ ಕೊನೆಗೂ ಕನಸು ನನಸಾಗಿದೆ.  

1997ರಲ್ಲಿ ಉಡುಪಿ ಜಿಲ್ಲೆ ಉದಯವಾದಾಗ ಮತ್ತೆ ಕಾರ್ಕಳ ತಾಲೂಕಿನಿಂದ ಕಳಚಿಕೊಂಡ ಮೂಡುಬಿದಿರೆ ದಕ್ಷಿಣ ಕನ್ನಡ ಜಿಲ್ಲೆಯ ಭಾಗವಾಗಿ ಮುಂದುವರೆದಿತ್ತು. 2013ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಜಗದೀಶ್ ಶೆಟ್ಟರ್ 2013ರ ಫೆ 8ರ ಬಜೆಟ್‍ನಲ್ಲಿ ಮೂಡುಬಿದಿರೆ ತಾಲೂಕು ಘೋಷಿಸಿದ್ದರಾದರೂ ನಂತರ ಕಾಂಗ್ರೆಸ್ ಸರ್ಕಾರ ಈ ಪ್ರಸ್ತಾವಗಳನ್ನು ಕೈ ಬಿಟ್ಟಿತ್ತು. 
 
ಹೊಸ ತಾಲೂಕು:
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1958ರಲ್ಲಿ ಬಂಟ್ವಾಳ ತಾಲೂಕು ರಚನೆಯಾಗಿ  ಇದೀಗ ಮತ್ತೆ ಬರೋಬ್ಬರಿ 60 ವರ್ಷಗಳ ಬಳಿಕ ದ.ಕ ಜಿಲ್ಲೆಯಲ್ಲಿ ಮೂಡುಬಿದಿರೆ ತಾಲೂಕಾಗಿದೆ. ಪಡುಮಾರ್ನಾಡು, ಮೂಡುಮಾರ್ನಾಡು, ದರೆಗುಡ್ಡೆ, ಪಣಪಿಲ, ಕೆಲ್ಲಪುತ್ತಿಗೆ, ನೆಲ್ಲಿಕಾರು, ಮಾಂಟ್ರಾಡಿ, ವಾಲ್ಪಾಡಿ, ಶಿರ್ತಾಡಿ, ಪಡುಕೊಣಾಜೆ, ಮೂಡು ಕೊಣಾಜೆ, ಪುಚ್ಚಮೊಗರು, ಇರುವೈಲು, ಹೊಸಬೆಟ್ಟು, ತೋಡಾರು, ಬಡಗ ಮಿಜಾರು, ತೆಂಕ ಮಿಜಾರು, ನಿಡ್ಡೋಡಿ, ಕಲ್ಲಮುಂಡ್ಕೂರು, ಕಡಂದಲೆ, ಪಾಲಡ್ಕ, ಬೆಳುವಾಯಿ, ಪುತ್ತಿಗೆ, ಪ್ರಾಂತ್ಯ, ಮಾರ್ಪಾಡಿ, ಕರಿಂಜೆ, ಕಲ್ಲಬೆಟ್ಟು, ಮಾರೂರು ನೂತನ ತಾಲೂಕಿನಡಿ ಸೇರಲಿವೆ. ಮೂಡುಬಿದಿರೆಯಲ್ಲಿ ಈಗಾಗಲೇ 2001ರಿಂದ ವಿಶೇಷ ತಹಸೀಲ್ದಾರ್ ಕಛೇರಿ ಕಾರ್ಯನಿರ್ವಹಿಸುತ್ತಿದ್ದು ಮಿನಿ ವಿಧಾನ ಸೌಧ ಸಹಿತ ಅಗತ್ಯ ಸಿಬಂದಿಗಳು, ಕೆಲವೊಂದು ಕಛೇರಿಗಳನ್ನು ಹೊರತು ಪಡಿಸಿದರೆ ಹೆಚ್ಚಿನ ತಾಲೂಕು ಸೌಲಭ್ಯಗಳು ಈಗಾಗಲೇ ಮೂಡುಬಿದಿರೆಯಲ್ಲಿವೆ. 

 

Post a Comment

0 Comments