ರಂಗನತಿಟ್ಟಿನಲ್ಲಿ ಬಾನಾಡಿಗಳ ಎಣಿಕೆ

ರಂಗನತಿಟ್ಟಿನಲ್ಲಿ ಬಾನಾಡಿಗಳ ಎಣಿಕೆ

12 Mar, 2018
ಶ್ರೀರಂಗಪಟ್ಟಣ: ತಾಲ್ಲೂಕಿನ ರಂಗನತಿಟ್ಟು ಪಕ್ಷಿಧಾಮದಲ್ಲಿ ಭಾನುವಾರ ಪಕ್ಷಿಗಳ ಗಣತಿ ಕಾರ್ಯ ನಡೆಯಿತು.

ಮೈಸೂರು ವನ್ಯಜೀವಿ ವಿಭಾಗ, ಮೈಸೂರು ನೇಚರ್‌ ಬರ್ಡ್ಸ್ ವಾಚರ್ಸ್‌ ಮತ್ತು ಬೆಂಗಳೂರು ಪಕ್ಷಿ ವೀಕ್ಷಕರ ತಂಡ ಮುಂಜಾನೆ 6 ಗಂಟೆಯಿಂದ 10ರ ವರೆಗೆ ಪಕ್ಷಿಧಾಮದ ವಿವಿಧೆಡೆ ಪಕ್ಷಿಗಳ ಗಣತಿ ನಡೆಸಿತು. 75 ಮಂದಿ 14 ತಂಡಗಳಲ್ಲಿ ಪಕ್ಷಿಗಳ ಗಣತಿ ಕಾರ್ಯ ನಡೆಸಿದರು.

ದೋಣಿಗಳ ಮೂಲಕ ಸಂಚಾರ ಮಾಡುತ್ತ ಬೈನಾಕ್ಯುಲರ್‌ ಮತ್ತು ಕ್ಯಾಮೆರಾಗಳನ್ನು ಬಳಸಿ ಪಕ್ಷಿಗಳ ಚಲನವಲನವನ್ನು ದಾಖಲಿಸಿದರು. ಹಕ್ಕಿಗಳು ಗೂಡು ಕಟ್ಟುತ್ತಿರುವುದು, ಮೊಟ್ಟೆ ಇಟ್ಟಿರುವುದು, ಮರಿಗಳಿಗೆ ಆಹಾರ ಉಣಿಸುವ ವಿವಿಧ ಹಂತದ ದೃಶ್ಯಗಳನ್ನು ಪಕ್ಷಿ ತಜ್ಞರು ದಾಖಲಿಸಿದರು.

ಪಕ್ಷಿಧಾಮದಲ್ಲಿ ಸದ್ಯ ಇರುವ ಪಕ್ಷಿಗಳ ಕುರಿತು ಮೈಸೂರು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಎಫ್‌ಒ) ಏಡುಕೊಂಡಲು ಪಕ್ಷಿಪ್ರಿಯರಿಗೆ ಮಾಹಿತಿ ನೀಡಿದರು. ಮೈಸೂರು ನೇಚರ್‌ ಬರ್ಡ್ಸ್ ವಾಚರ್ಸ್‌ ತಂಡದ ಮುಖ್ಯಸ್ಥ ಶಿವಪ್ರಕಾಶ್‌ ಅದ್ವಾನೆ, ಪಕ್ಷಿತಜ್ಞರಾದ ತನುಜಾ, ಚಂದ್ರಶೇಖರ್‌, ಸಪ್ತಗಿರಿ, ವಲಯ ಅರಣ್ಯಾಧಿಕಾರಿ ಅನನ್ಯಕುಮಾರ್‌, ಉಪ ವಲಯ ಅರಣ್ಯಾಧಿಕಾರಿ ಪುಟ್ಟಮಾದೇಗೌಡ ಇತರರ ತಂಡ ಪಕ್ಷಿಗಳ ಬಗ್ಗೆ ಅಗತ್ಯ ಮಾಹಿತಿಯನ್ನು ದಾಖಲಿಸಿತು.

‘ರಂಗನತಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಪಕ್ಷಿಗಳ ಗಣತಿ ನಡೆದಿದೆ. ಇಲ್ಲಿ 8 ದೊಡ್ಡ ದ್ವೀಪಗಳು ಸೇರಿ ಒಟ್ಟು 25 ದ್ವೀಪಗಳಿವೆ. ಈ ದ್ವೀಪಗಳಿಗೆ ತೆರಳಿದ ತಜ್ಞರ ತಂಡ ಸನಿಹದಿಂದ ಪಕ್ಷಿಗಳ ವೀಕ್ಷಣೆ ಮಾಡಿ ಮಾಹಿತಿ ಸಂಗ್ರಹಿಸಿದೆ. ಇನ್ನು ಒಂದು ವಾರದಲ್ಲಿ ಪಕ್ಷಿಗಳ ಅಂದಾಜು ಸಂಖ್ಯೆ, ಅವುಗಳ ಜೀವನಕ್ರಮದ ಬಗ್ಗೆ ನಿಖರ ಮಾಹಿತಿ ಸಿಗಲಿದೆ’ ಎಂದು ಚಂದ್ರಶೇಖರ್‌ ತಿಳಿಸಿದರು.

ರಂಗನತಿಟ್ಟಿನಲ್ಲಿ ಸದ್ಯ ಪೆಲಿಕಾನ್‌, ಸ್ಪೂನ್‌ಬಿಲ್‌, ಓಪನ್‌ಬಿಲ್‌, ಪೇಂಟೆಡ್‌ ಸ್ಟಾರ್ಕ್, ಕಾರ್ಮೊರೆಂಟ್‌, ನೈಟ್‌ ಹೆರಾನ್‌, ರಿವರ್‌ಟರ್ನ್‌, ಸ್ಟೋನ್ ಫ್ಲವರ್‌ ಜಾತಿಯ ಪಕ್ಷಿಗಳಿವೆ. ಕಾಡು ಹುಣಸೆ, ನೀರಂಜಿ, ಹೊಂಗೆ, ಮುಳ್ಳಿ, ಮತ್ತಿ ಮರಗಳ ಮೇಲೆ ತಾವು ಮಾಡಿಕೊಂಡಿವೆ.

‘ಪೆಲಿಕಾನ್‌ಗಳು ಈಗಾಗಲೇ ಮರಿ ಮಾಡಿದ್ದು, ಮರಿಗಳ ಲಾಲನೆ ಪಾಲನೆಯಲ್ಲಿ ತೊಡಗಿವೆ. ಪೇಂಟೆಡ್‌ ಸ್ಟಾರ್ಕ್‌, ಓಪನ್‌ಬಿಲ್‌ ಪಕ್ಷಿಗಳು ಗೂಡು ಕಟ್ಟಲು ಶುರು ಮಾಡಿವೆ. ಒಂದೂವರೆ ಸಾವಿರ ಪೆಲಿಕಾನ್‌ಗಳು ಸೇರಿ ಪಕ್ಷಿಧಾಮದಲ್ಲಿ 4ರಿಂದ 5 ಸಾವಿರ ಪಕ್ಷಿಗಳಿವೆ. ಏಪ್ರಿಲ್‌ ಮೊದಲ ವಾರ ಐಬಿಸ್‌ ಜಾತಿಯ ಪಕ್ಷಿಗಳು ಸಹಸ್ರ ಸಂಖ್ಯೆಯಲ್ಲಿ ಇಲ್ಲಿಗೆ ಬಂದಿಳಿಯಲಿವೆ’ ಎಂದು ಪಕ್ಷಿಧಾಮದ ಅಧಿಕಾರಿಗಳು ತಿಳಿಸಿದ್ದಾರೆ.

ಹಕ್ಕಿ ಗಣತಿಯ ಉದ್ದೇಶ

‘ಪಕ್ಷಿ ಸಂಕುಲದ ಉಳಿವಿಗಾಗಿ ಶ್ರಮಿಸುತ್ತಿರುವ ರಾಮ್‌ಸರ್‌ (RAMSAR) ಕನ್ವೆನ್ಷನ್‌ ಸೈಟ್‌ ಪಟ್ಟಿಗೆ ರಂಗನತಿಟ್ಟು ಪಕ್ಷಿಧಾಮವನ್ನು ಸೇರಿಸಲು ಹಕ್ಕಿ ಗಣತಿ ಸಹಕಾರಿಯಾಗಲಿದೆ. ಪಕ್ಷಿಗಳ ಆವಾಸ ಸ್ಥಾನ ವಿಸ್ತಾರಗೊಳಿಸಲು, ಪಕ್ಷಿಧಾಮಗಳನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡಲು, ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾಹಿತಿ ಪಸರಿಸಲು ಹಾಗೂ ಪಕ್ಷಿಗಳ ವರ್ಗೀಕರಣ ಮತ್ತು ಅವುಗಳ ಅಧ್ಯಯನಕ್ಕೆ ಅನುಕೂಲವಾಗಲಿದೆ. ಈ ಗಂಪಿಗೆ ಸೇರಿದರೆ ಹೆಚ್ಚಿನ ಅನುದಾನ ಕೂಡ ಸಿಗಲಿದೆ’ ಎಂದು ಡಿಎಫ್‌ಒ ಏಡುಕೊಂಡಲು ತಿಳಿಸಿದರು.

Post a Comment

0 Comments