ಟಿಡಿಎಸ್ ಎಂದರೇನು? ಅದು ಹೇಗೆ ಕಾರ್ಯ ನಿರ್ವಹಿಸುತ್ತದೆ?

ಟಿಡಿಎಸ್ ಎಂದರೇನು? ಅದು ಹೇಗೆ ಕಾರ್ಯ ನಿರ್ವಹಿಸುತ್ತದೆ?

ಟಿಡಿಎಸ್‌ ಅನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?, ಟಿಡಿಎಸ್ ಮರು ಪಾವತಿ ಸಾಧ್ಯವೇ?

Published: 05 Mar 2018 01:12 PM IST | Updated: 05 Mar 2018 01:13 PM IST

ಸಂಗ್ರಹ ಚಿತ್ರ
ಟ್ಯಾಕ್ಸ್ ಡಿಡಕ್ಟೆಡ್ ಅಟ್ ಸೋರ್ಸ್(ಟಿಡಿಎಸ್) ಅಂದರೆ ಮೂಲದಲ್ಲಿಯೇ ತೆರಿಗೆ ಕಡಿತ... ಹೆಸರೇ ಸೂಚಿಸುವಂತೆ ಆದಾಯದ ಮೂಲದಲ್ಲಿಯೇ ತೆರಿಗೆ ಸಂಗ್ರಹದ ಉದ್ದೇಶವನ್ನುಈ ವ್ಯವಸ್ಥೆ ಹೊಂದಿದೆ.
ಆದಾಯ ತೆರಿಗೆ ಕಾಯ್ದೆ 1961ರ ಅನ್ವಯ ವೇತನಗಳು ಸಾಮಾನ್ಯವಾಗಿ ಟಿಡಿಎಸ್ ಅಡಿಯಲ್ಲಿ ಬರುತ್ತವೆ. ಹಾಗೆಯೇ ಬ್ಯಾಂಕ್ ಠೇವಣಿಗಳು ಮತ್ತು ಇತರ ಹೂಡಿಕೆಗಳ ಮೇಲಿನ ಬಡ್ಡಿ, ವಿಮಾ ಕಂಪನಿಗಳ ಏಜೆಂಟರ ಕಮಿಷನ್ ಇತ್ಯಾದಿಗಳೂ ಟಿಡಿಎಸ್ ವ್ಯಾಪ್ತಿಗೊಳಪಟ್ಟಿವೆ. ತಮ್ಮ ನೌಕರರಿಗೆ ವೇತನಗಳನ್ನು ನೀಡುವ ಉದ್ಯೋಗದಾತರು ವೇತನ ಪಾವತಿಯ ಸಂದರ್ಭ ಆದಾಯ ತೆರಿಗೆಯನ್ನು ಕಡಿತಗೊಳಿಸುವುದು ಕಡ್ಡಾಯವಾಗಿದ್ದು, ಅದನ್ನು ಅವರು ನೇರವಾಗಿ ಕೇಂದ್ರ ಸರ್ಕಾರದ ಆದಾಯ ಇಲಾಖೆಗೆ ಪಾವತಿಸುತ್ತಾರೆ.
ಇಂತಹ ತೆರಿಗೆ ಸಂಗ್ರಹ ವ್ಯವಸ್ಥೆಯನ್ನು ಕೇಂದ್ರ ವಿತ್ತ ಸಚಿವಾಲಯದ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ನಿರ್ವಹಣೆ ಮಾಡುತ್ತದೆ. ಈ ಸಿಬಿಡಿಟಿ ಕೇಂದ್ರ ಆದಾಯ ತೆರಿಗೆ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತದೆ.  ಟಿಡಿಎಸ್ ಪ್ರಮುಖವಾಗಿ ಸಂಸ್ಥೆಗಳ ಲೆಕ್ಕಪತ್ರ ವಿಭಾಗವು ಉದ್ಯೋಗಿಯ ಅಂದಾಜು ತೆರಿಗೆ ಅರ್ಹ ವೇತನದ ಆಧಾರದಲ್ಲಿ ಆದಾಯ ತೆರಿಗೆಯನ್ನು ಲೆಕ್ಕ ಹಾಕಲು ನೆರವಾಗುತ್ತದೆ.
ಆದಾಯ ನೀಡುವ ಉದ್ಯೋಗದಾತ ಹಾಗೂ ತೆರಿಗೆ ಸಂಸ್ಥೆ ಜೊತೆ ತೆರಿಗೆ ವ್ಯವಹಾರಕ್ಕೆ ಇದೇ ಪ್ರಮುಖ ಸಾಧನವಾಗಿದ್ದು, ಸರ್ಕಾರದ ಬೊಕ್ಕಸಕ್ಕೆ ತೆರಿಗೆ ಹಣ ತುಂಬುವುದು ಹೀಗೆ. ಪ್ರತಿ ತಿಂಗಳ ಕೊನೆಯೊಳಗೆ ಟಿಡಿಎಸ್ ತೆರಿಗೆ ಮುರಿದುಕೊಳ್ಳುವ ಉದ್ಯೋಗದಾತರು ಅಥವಾ ಸಂಸ್ಥೆಗಳು ಅದನ್ನು ಒಂದೇ ವಾರದ ಅವಧಿಯಲ್ಲಿ ಠೇವಣಿ ಇಡಬೇಕು. ಮೂಲದಲ್ಲಿ ತೆರಿಗೆ ಕಡಿತ ಮಾಡಿಕೊಳ್ಳುವ ಎಲ್ಲಾ ಉದ್ಯೋಗದಾತರು ಇದಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ನಿಗದಿತ ಅರ್ಜಿ ನಮೂನೆಯಲ್ಲಿ ಪ್ರತಿ ತ್ರೈಮಾಸಿಕಕ್ಕೆ ಒಮ್ಮೆ ಕಡ್ಡಾಯವಾಗಿ ಸಲ್ಲಿಸಬೇಕು. ಆದಾಯ ಅಥವಾ ವರಮಾನ ನೀಡುವ(ಪಾವತಿಸುವ) ವ್ಯಕ್ತಿಯು(ಉದಾಹರಣೆಗೆ ಉದ್ಯೋಗದಾತ) ತೆರಿಗೆಯನ್ನು ಮುರಿದುಕೊಂಡು ಉಳಿದ ಮೊತ್ತವನ್ನು ಆದಾಯದಾರನಿಗೆ ನೀಡುತ್ತಾನೆ. ಮೂಲದಲ್ಲಿ ತೆರಿಗೆ ಕಡಿತ ಮಾಡಿರುವುದಕ್ಕೆ ಉದ್ಯೋಗದಾತರು ಉದ್ಯೋಗಿಗೆ ಟಿಡಿಎಸ್ ಪ್ರಮಾಣಪತ್ರ ಒದಗಿಸುತ್ತಾರೆ.
ಉದ್ಯೋಗಿಗಳಿಗೆ ಪಾವತಿಸುವ ವೇತನದಂತಹ ಆದಾಯಗಳಿಗೆ ಟಿಡಿಎಸ್ ಅನ್ವಯವಾಗುತ್ತದೆ. ಅದೇ ರೀತಿ, ಬ್ಯಾಂಕ್ ಮತ್ತು ಬಾಂಡ್ ಠೇವಣಿಗಳಿಗೆ ಸಿಗುವ ಬಡ್ಡಿಹಣ, ಲಾಟರಿ ಮತ್ತು ಕುದುರೆ ಸ್ಪರ್ಧೆಗಳಲ್ಲಿ ಗೆಲ್ಲುವ ಹಣ ಇತ್ಯಾದಿಗಳಿಗೆ ಟಿಡಿಎಸ್ ತೆರಿಗೆ ಕಟ್ಟಲೇಬೇಕು. ಜೂಜಾಟದಲ್ಲಿ ಗೆದ್ದ ಬಹುಮಾನದ ಮೇಲೆ ಶೇ 30 ರಷ್ಟು ಟಿಡಿಎಸ್ ಕಡಿತವಾಗಲಿದೆ.
ಟಿಡಿಎಸ್‌ ಅನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?
ನಿಮ್ಮ ಒಟ್ಟು ಆದಾಯದಲ್ಲಿ ಹಣಕಾಸು ವರ್ಷದಲ್ಲಿ ನೀವು ಮಾಡಲು ಉದ್ದೇಶಿಸಿರುವ ತೆರಿಗೆ ಉಳಿತಾಯ ವೆಚ್ಚಗಳನ್ನು ಕಳೆದು ಅಂದಾಜು ತೆರಿಗೆಗೆ ಅರ್ಹ ಆದಾಯವನ್ನು ಲೆಕ್ಕ ಹಾಕಲಾಗುತ್ತದೆ. ತೆರಿಗೆ ಉಳಿತಾಯವನ್ನು ನೀಡುವ ಯಾವುದೇ ಉದ್ದೇಶಿತ ಹೂಡಿಕೆ ಯನ್ನು ಘೋಷಿಸದಿದ್ದರೆ ಪೂರ್ಣ ವೇತನದ ಮೇಲೆ ಮೂಲದಲ್ಲಿಯೇ ತೆರಿಗೆಯನ್ನು ಕಡಿತಗೊಳಿಸಲಾಗುತ್ತದೆ.
ಮೂಲದಲ್ಲಿ ತೆರಿಗೆ ಕಡಿತ ಪ್ರಮಾಣ ಪತ್ರದಲ್ಲಿ ಎರಡು ಬಗೆ ಇದ್ದು,
ಸಂಬಳದಾರರು: ಅರ್ಜಿ 16
ಈ ಅರ್ಜಿ ಮೂಲಕ ಸಂಬಳದಾರರ ತೆರಿಗೆ ಪಾವತಿ ಹಾಗೂ ಕಡಿತದ ಸಂಪೂರ್ಣ ಮಾಹಿತಿ ಸಿಗಲಿದೆ.
ಮತ್ತೊಂದು ಸಂಬಳದಾರರಲ್ಲದವರು: ಅರ್ಜಿ 16 A
ಇದು ಕೂಡಾ ಪ್ರತ್ಯೇಕವಾಗಿ ಪ್ರತಿ ತೆರಿಗೆ ಕಡಿತ ಹಾಗೂ ಪಾವತಿ ವಿವರಗಳನ್ನು ಹೊಂದಿರುತ್ತದೆ. ಪ್ರತ್ಯೇಕ ವಿಭಾಗಕ್ಕೆ ಪ್ರತ್ಯೇಕವಾಗಿ ಅರ್ಜಿ ತುಂಬಬೇಕಾಗುತ್ತದೆ.
ವಾರ್ಷಿಕವಾಗಿ ಸಂಬಳದಿಂದ ಬರುವ ಆದಾಯ ಲೆಕ್ಕ ಹಾಕಲಾಗುವುದು ನಂತರ ವಾರ್ಷಿಕವಾಗಿ ಕಟ್ಟಬೇಕಾಗಿರುವ ತೆರಿಗೆಯ ವಿವರ ಸಂಗ್ರಹಿಸಲಾಗುವುದು. ಸರಾಸರಿ ದರದ ಮೇಲೆ ತೆರಿಗೆ ಕಡಿತ ಮಾಡಲಾಗುತ್ತದೆ. ಉದಾಹರಣೆಗೆ : ವಾರ್ಷಿಕವಾಗಿ 24,000 ರು ತೆರಿಗೆ ಕಟ್ಟಬೇಕಾದರೆ 2000 ರು ಟಿಡಿಎಸ್ ರೂಪದಲ್ಲಿ ಪ್ರತಿ ತಿಂಗಳು ಕಡಿತ ಮಾಡಲಾಗುತ್ತದೆ.
ಟಿಡಿಎಸ್ ಮರು ಪಾವತಿ ಸಾಧ್ಯವೇ?
ಟಿಡಿಎಸ್ ಮರುಪಾವತಿ ಸಾಧ್ಯವಿದೆ. ಕೆಲವು ಸಂದರ್ಭದಲ್ಲಿ ಮೂಲ ತೆರಿಗೆಗಿಂತ ಹೆಚ್ಚಿನ ಟಿಡಿಎಸ್ ಕಡಿತವಾಗಿದ್ದರೆ ರೀಫಂಡ್ ಗೆ ಬೇಡಿಕೆ ಇಡಬಹುದು. ಹಣಕಾಸು ವರ್ಷದಲ್ಲಿ ಆದಾಯ ತೆರಿಗೆ ಕಾಯ್ದೆಯಂತೆ ನಿಮ್ಮ ಒಟ್ಟು ಆದಾಯದಲ್ಲಿ ಕಡಿತಕ್ಕೆ ಅರ್ಹವಿರುವ, ತೆರಿಗೆಯನ್ನು ಉಳಿಸುವ ಯಾವುದೇ ಹೂಡಿಕೆ ಅಥವಾ ಗೃಹಸಾಲದ ಮೇಲಿನ ಬಡ್ಡಿಯಂತಹ ಇತರ ಯಾವುದೇ ವೆಚ್ಚವನ್ನು ಮಾಡಿದ್ದರೆ ಉದ್ಯೋಗಿಯು ಇಂತಹ ಹೂಡಿಕೆಗಳು ಅಥವಾ ವೆಚ್ಚಗಳ ಪುರಾವೆಗಳನ್ನು ಉದ್ಯೋಗದಾತರಿಗೆ ಸಲ್ಲಿಸಬೇಕಾಗುತ್ತದೆ. ಇಂತಹ ದಾಖಲೆಗಳನ್ನು ಸಲ್ಲಿಸಿದ ಬಳಿಕ ಲೆಕ್ಕಪತ್ರ ವಿಭಾಗವು ಅವುಗಳ ಆಧಾರದ ಮೇಲೆ ತೆರಿಗೆಯನ್ನು ಲೆಕ್ಕ ಹಾಕುತ್ತದೆ ಮತ್ತು ನಿಮ್ಮ ವೇತನದಿಂದ ಹೆಚ್ಚುವರಿ ತೆರಿಗೆ ಕಡಿತವಾಗುವುದು ತಪ್ಪುತ್ತದೆ.
ಬ್ಯಾಂಕಿಂಗ್ ಸಂಸ್ಥೆ, ಕೋ ಆಪರೇಟಿವ್ ಸೊಸೈಟಿ, ಪೈನಾನ್ಸಿಂಗ್ ಅಥವಾ ವಸತಿ ಕಟ್ಟಡ ನಿರ್ಮಾಣ ಸಂಸ್ಥೆಗಳಿಗೆ ಬಡ್ಡಿ ದರ ಮಿತಿ 10,000 ರು ತನಕ ಇದ್ದು, ಇದಕ್ಕೆ ಟಿಡಿಎಸ್ ಶೇ.10 ರಷ್ಟು ಪಾವತಿ ಮಾಡಬೇಕಾಗುತ್ತದೆ. ಹೀಗಾಗಿ ತೆರಿಗೆ ಉಳಿತಾಯದ ಲಾಭವನ್ನು ಪಡೆಯಲು ಸರಿಯಾದ ಎಲ್ಲ ದಾಖಲೆಗಳನ್ನು ಸಕಾಲದಲ್ಲಿ ನಿಮ್ಮ ಉದ್ಯೋಗದಾತರಿಗೆ ಸಲ್ಲಿಸಲು ಮಾತ್ರ ಮರೆಯಬೇಡಿ.

Post a Comment

0 Comments