ಖ್ಯಾತ ಭೌತಶಾಸ್ತ್ರಜ್ಞ ಸ್ಟೀಫನ್‌ ಹಾಕಿಂಗ್‌ ನಿಧನ

ಖ್ಯಾತ ಭೌತಶಾಸ್ತ್ರಜ್ಞ ಸ್ಟೀಫನ್‌ ಹಾಕಿಂಗ್‌ ನಿಧನ
TIMESOFINDIA.COM | Updated Mar 14, 2018, 09:51 AM IST

ಹೊಸದಿಲ್ಲಿ: ಖ್ಯಾತ ಬ್ರಿಟಿಷ್‌ ಭೌತಶಾಸ್ತ್ರಜ್ಞ ಸ್ಟೀಫನ್‌ ಹಾಕಿಂಗ್‌ ಬುಧವಾರ ಬೆಳಗ್ಗೆ ನಿಧನರಾದರು. ಅವರಿಗೆ 76 ವರ್ಷ ವಯಸ್ಸಾಗಿತ್ತು.

ಅಪರೂಪದ ನರ ದೌರ್ಬಲ್ಯದ 'ಅಮಿಯೊಟ್ರೋಫಿಕ್ ಲ್ಯಾಟರಲ್ ಸ್ಕ್ಲೆರಾಸಿಸ್‌'ನ (ಅಥವಾ ALS) ವಿಧವಾದ ತೀವ್ರತರದ ಸ್ನಾಯುಚಾಲಕ ನರಕೋಶದ ಕಾಯಿಲೆಗೆ ತುತ್ತಾಗಿ ವಿಪರೀತ ಅಶಕ್ತತೆಗೆ ಗುರಿಯಾಗಿದ್ದರು. ಅವರ ಈ ಕಾಯಿಲೆಯನ್ನು 'ಬೆನ್ನುಹುರಿಯ ಸ್ನಾಯು ಕ್ಷೀಣತೆಯ IVನೇ ವಿಧ' ಎಂದೂ ಗುರುತಿಸಲಾಗಿದೆ.
ದಶಕಗಳ ಕಾಲ ಈ ಕಾಯಿಲೆಯಿಂದ ನರಳಿದ ಅವರು ಕ್ರಮೇಣ ಪಾರ್ಶ್ವವಾಯುವಿಗೆ ತುತ್ತಾದರು. ಹಾಕಿಂಗ್‌ ಅವರ 21 ವರ್ಷ ವಯಸ್ಸಿನಲ್ಲೇ (1963) ಈ ಕಾಯಿಲೆ ಇರುವುದು ಪತ್ತೆಯಾಗಿತ್ತು.

ಖ್ಯಾತ ಸೈದ್ಧಾಂತಿಕ ಭೌತಶಾಸ್ತ್ರಜ್ಞರಾಗಿದ್ದ ಅವರಿಗೆ 13 ಗೌರವ ಪದವಿಗಳು ದೊರೆತಿದ್ದವು. ಸಿಬಿಇ (1982), ಕಂಪ್ಯಾನಿಯನ್‌ ಆಫ್‌ ಆನರ್‌ (1989) ಮತ್ತು ಪ್ರಸಿಡೆನ್ಷಿಯಲ್‌ ಮೆಡಲ್ ಆಫ್‌ ಫ್ರೀಡಂ' (2009) ಪ್ರಶಸ್ತಿಗಳು ಅವರಿಗೆ ದೊರೆತಿವೆ. ಅಲ್ಲದೆ, ಫಂಡಮೆಂಟಲ್‌ ಫಿಸಿಕ್ಸ್‌ ಪ್ರೈಜ್‌ (2013), ಕಾಪ್ಲೆ ಮೆಡಲ್‌ (2006) ಮತ್ತು ವೂಲ್ಫ್‌ ಫೌಂಡೇಶನ್‌ ಪ್ರೈಜ್‌ (1988) ಸೇರಿದಂತೆ ಇನ್ನೂ ಹಲವಾರು ಪದಕಗಳು, ಪಾರಿತೋಷಕಗಳನ್ನು ಅವರು ಪಡೆದಿದ್ದರು.

ಪ್ರತಿಷ್ಠಿತ ರಾಯಲ್‌ ಸೊಸೈಟಿಯ ಫೆಲೋ ಆಗಿದ್ದ ಅವರು, ಅಮೆರಿಕದ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ ಮತ್ತು ಪೋಂಟಿಫಿಶಿಯಲ್ ಅಕಾಡೆಮಿ ಆಫ್‌ ಸೈನ್ಸಸ್‌ನ ಸದಸ್ಯರೂ ಆಗಿದ್ದರು.

1942ರ ಜನವರಿ 8ರಂದು ಅವರು ಇಂಗ್ಲೆಂಡ್‌ನ ಆಕ್ಸ್‌ಫರ್ಡ್‌ನಲ್ಲಿ ಜನಿಸಿದ್ದರು.

Post a Comment

0 Comments