ರಾಜೀವ್ ಗಾಂಧಿ (ನಾಗರಹೊಳೆ) ರಾಷ್ಟ್ರೀಯ ಉದ್ಯಾನ

ನಾಗರಹೊಳೆ ರಾಷ್ಟ್ರೀಯ ಉದ್ಯಾನ



ನಾಗರಹೊಳೆ ಅಭಯಾರಣ್ಯವನ್ನು ಉನ್ನತೀಕರಿಸುವ ಮೂಲಕ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ್ನು ರಚಿಸಲಾಯಿತು.

1992ರಲ್ಲಿ ದಿವಂಗತ ಪ್ರಧಾನಿ ಶ್ರೀ ರಾಜೀವಗಾಂಧಿಯವರ ಮೊದಲ ಪುಣ್ಯತಿಥಿ ಸ್ಮರಣಾರ್ಥ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ್ನು “ರಾಜೀವ್ ಗಾಂಧಿ (ನಾಗರಹೊಳೆ) ರಾಷ್ಟ್ರೀಯ ಉದ್ಯಾನ” ಎಂದು ಮರುನಾಮಕರಣ ಮಾಡಲಾಯಿತು. 

ರಾಷ್ಟ್ರೀಯ ಉದ್ಯಾನದಲ್ಲಿ ಸಾಕಷ್ಟು ಸಂಖ್ಯೆಯ ಆನೆಗಳು ಇರುವ ಹಿನ್ನೆಲೆಯಲ್ಲಿ ನಾಗರಹೊಳೆಯನ್ನು 2000ನೇ ಇಸವಿಯಲ್ಲಿ ‘ಆನೆ ಯೋಜನೆ’ಗೆ ಸೇರಿಸಲಾಯಿತು ಮತ್ತು ಇದನ್ನು ‘ಮೈಸೂರು ಆನೆ ಮೀಸಲು’ ಪ್ರದೇಶದ ಭಾಗವಾಗಿ ಮಾಡಲಾಯಿತು.

2003ರಲ್ಲಿ 71.84 ಚ.ಕಿ.ಮೀ. ಅರಣ್ಯ ಪ್ರದೇಶವನ್ನು ಸೇರಿಸಿದ್ದರಿಂದ ರಾಷ್ಟ್ರೀಯ ಉದ್ಯಾನದ ವಿಸ್ತಾರ 643.39 ಚ.ಕಿ.ಮೀ.ಗೆ ಹೆಚ್ಚಿತು.

ಮಹತ್ವ

ನಾಗರಹೊಳೆ ರಾಷ್ಟ್ರೀಯ ಉದ್ಯಾನ ನಾಗರಹೊಳೆ ಹುಲಿ ಮೀಸಲು ಪ್ರದೇಶದ ಮುಖ್ಯ ಅಥವಾ ನಿರ್ಣಾಯಕ ಹುಲಿ ಆವಾಸ ಸ್ಥಳವಾಗಿದೆ.

ರಾಷ್ಟ್ರೀಯ ಉದ್ಯಾನ ಬ್ರಹ್ಮಗಿರಿ ಗಿರಿಶಿಖರಗಳ ಪಶ್ಚಿಮದ ಸಂಪರ್ಕ ಬಿಂದುವಾಗಿದೆ, ಇದು ಮುಂದುವರಿದು ಉತ್ತರದಲ್ಲಿ ತಲಕಾವೇರಿ ವನ್ಯಜೀವಿ ಅಭಯಾರಣ್ಯದೊಂದಿಗೆ ವಿಲೀನಗೊಳ್ಳುತ್ತದೆ, ಇದು ಅಂತಿಮವಾಗಿ ಕುದುರೆಮುಖ- ಭದ್ರಾ ಭೂಪರಿಸರದೊಂದಿಗೆ ಸೇರುತ್ತದೆ. ಆಗ್ನೇಯದಲ್ಲಿ ಇದು ಕರ್ನಾಟಕದ ಬಂಡೀಪುರ ಹುಲಿ ಮೀಸಲು ಪ್ರದೇಶದ ವಿಸ್ತಾರವಾದ ಅರಣ್ಯ ಪ್ರದೇಶ ಮತ್ತು ತಮಿಳುನಾಡಿನ ಮುದುಮಲೈ ಹುಲಿ ಮೀಸಲು ಪ್ರದೇಶದೊಂದಿಗೆ ಸಂಪರ್ಕ ಹೊಂದುತ್ತದೆ.ನೈರುತ್ಯ ಭಾಗದಲ್ಲಿ ಇದು ಕೇರಳದ ವಯನಾಡು ವನ್ಯಜೀವಿ ಅಭಯಾರಣ್ಯದ ಜೊತೆಗೆ ಸಂಪರ್ಕ ಹೊಂದಿದೆ. ಈ ಮೂಲಕ ನೆರೆಯ ವಾಸ ಸ್ಥಳಗಳ ಜೊತೆ ಹಸಿರು ಕೊರಳಮಾಲೆಯ ವಿನ್ಯಾಸದ ಸಂಪರ್ಕವನ್ನು ರಚಿಸುತ್ತದೆ.

ರಾಷ್ಟ್ರೀಯ ಉದ್ಯಾನದ ನಾಗರಹೊಳೆ ಹುಲಿ ಮೀಸಲು ಪ್ರದೇಶ ಹುಲಿಗಳ ಸಂತತಿಗೆ ನೈಸರ್ಗಿಕ ಆವಾಸ ಸ್ಥಳವಾಗಿದೆ. ಸಂಪೂರ್ಣ ನಾಗರಹೊಳೆ-ಬಂಡೀಪುರ-ಮುದುಮಲೈ-
ವಯನಾಡು ಸಂರಕ್ಷಣಾ ಘಟಕ ವಿಶ್ವದ ಏಕೈಕ ಅತಿದೊಡ್ಡ ಹುಲಿ ಸಂತತಿಯ ಮೂಲವಾಗಿದೆ.

Post a Comment

0 Comments