ಬೌದ್ಧ-ಮುಸ್ಲಿಂ ಹಿಂಸಾಚಾರ: ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ

ಬೌದ್ಧ-ಮುಸ್ಲಿಂ ಹಿಂಸಾಚಾರ: ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ

ಕೊಲಂಬೋ: ಕೋಮು ಹಿಂಸಾಚಾರ ಹತ್ತಿಕ್ಕಲು ಶ್ರೀಲಂಕಾ 10 ದಿನಗಳ ತುರ್ತು ಪರಿಸ್ಥಿತಿ ಘೋಷಿಸಿದೆ. ಲಂಕಾದ ಮಧ್ಯಭಾಗದಲ್ಲಿರುವ ಕ್ಯಾಂಡಿ ಜಿಲ್ಲೆಯಲ್ಲಿ ಬೌದ್ಧರು ಮತ್ತು ಮುಸ್ಲಿಮರ ನಡುವೆ ಸೋಮವಾರ ಹಿಂಸಾಚಾರ ನಡೆದಿತ್ತು.

ಮುಸ್ಲಿಮರು ಬಲವಂತದ ಮತಾಂತರ ನಡೆಸುತ್ತಿದ್ದು, ಬೌದ್ಧರ ಪ್ರಾಚೀನ ಕ್ಷೇತ್ರಗಳನ್ನು ಧ್ವಂಸ ಮಾಡುತ್ತಿದ್ದಾರೆ ಎಂದು ಬೌದ್ಧ ಸಂಘಟನೆಗಳು ಆರೋಪಿಸಿವೆ. ಈ ವಿಚಾರವಾಗಿ ಕಳೆದ ಒಂದು ವರ್ಷದಿಂದ ಲಂಕೆಯ ಹಲವೆಡೆ ಕೋಮು ಗಲಭೆಗಳು ನಡೆದಿದ್ದು, ಬಿಗು ಪರಿಸ್ಥಿತಿ ಉಂಟಾಗಿದೆ.
ಮ್ಯಾನ್ಮಾರ್‌ನಿಂದ ಪಲಾಯನ ಮಾಡಿದ ರೋಹಿಂಗ್ಯಾ ಮುಸ್ಲಿಮರಿಗೆ ಶ್ರೀಲಂಕಾದಲ್ಲಿ ಆಶ್ರಯ ನೀಡಬಾರದು ಎಂದು ಆಗ್ರಹಿಸಿ ಕೆಲವು ಬೌದ್ಧ ರಾಷ್ಟ್ರೀಯವಾದಿಗಳು ಪ್ರತಿಭಟನೆ ನಡೆಸಿದ್ದಾರೆ. ಇತ್ತೀಚೆಗೆ ಲಂಕಾದಲ್ಲಿ ಬೌದ್ಧ ರಾಷ್ಟ್ರೀಯವಾದ ಪ್ರಬಲವಾಗುತ್ತಿದೆ.

'ವಿಶೇಷ ಸಂಪುಟ ಸಭೆಯಲ್ಲಿ 10 ದಿನಗಳ ತುರ್ತು ಪರಿಸ್ಥಿತಿ ಹೇರುವ ನಿರ್ಧಾರ ಕೈಗೊಳ್ಳಲಾಯಿತು. ದೇಶದ ಇತರ ಭಾಗಗಳಿಗೆ ಕೋಮು ಹಿಂಸೆ ಹರಡದಂತೆ ತಡೆಯುವುದೇ ಇದರ ಉದ್ದೇಶ' ಎಂದು ಸರಕಾರಿ ವಕ್ತಾರ ದಯಾಸಿರಿ ಜಯಶೇಖರ ಅವರು ರಾಯ್ಟರ್ಸ್‌ ಸುದ್ದಿಸಂಸ್ಥೆಗೆ ತಿಳಿಸಿದರು.

ಫೇಸ್‌ಬುಕ್‌ ಮೂಲಕ ಹಿಂಸೆಗೆ ಪ್ರಚೋದನೆ ನೀಡುವವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದರು.

ಮುಸ್ಲಿಂ ಮಾಲೀಕತ್ವದ ಅಂಗಡಿಯನ್ನು ಗುಂಪೊಂದು ಸುಟ್ಟುಹಾಕಿದ ಬಳಿಕ ಹಿಂಸಾಚಾರ ತಡೆಯಲು ಕ್ಯಾಂಡಿ ಜಿಲ್ಲೆಗೆ ಸೇನೆ ಮತ್ತು ವಿಶೇಷ ಪೊಲೀಸ್‌ ಪಡೆಯನ್ನು ಲಂಕಾ ಸರಕಾರ ರವಾನಿಸಿದೆ.

Post a Comment

0 Comments