2025ಕ್ಕೆ ‘ಕ್ಷಯಮುಕ್ತ ಭಾರತ’ ಗುರಿ

2025ಕ್ಕೆ ‘ಕ್ಷಯಮುಕ್ತ ಭಾರತ’ ಗುರಿ

13 Mar, 2018ಪಿಟಿಐ
ನವದೆಹಲಿ: 2025ರ ವೇಳೆಗೆ ದೇಶವನ್ನು ಕ್ಷಯರೋಗ ಮುಕ್ತವಾಗಿ ಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

‘ಪ್ರತಿಯೊಬ್ಬ ಕ್ಷಯರೋಗಿಗೂ ಮೊದಲ ಬಾರಿಗೇ ಉತ್ತಮ ಚಿಕಿತ್ಸೆ ನೀಡಬೇಕು ಎನ್ನುವ ನಿಯಮವನ್ನು ಕೇಂದ್ರ ಸರ್ಕಾರ ಅನುಸರಿಸುತ್ತಿದೆ. ಕ್ಷಯರೋಗಮುಕ್ತ ಗ್ರಾಮ, ಪಂಚಾಯತಿ, ಜಿಲ್ಲೆ ಹಾಗೂ ರಾಜ್ಯವನ್ನು ಸೃಷ್ಟಿಸಲು ಸಂಬಂಧಪಟ್ಟವರು ಎಲ್ಲಾ ಹಂತಗಳಲ್ಲೂ ಪಾಲ್ಗೊಳ್ಳಬೇಕು’ ಎಂದು ಅವರು ಕರೆ ನೀಡಿದ್ದಾರೆ.

ಕ್ಷಯರೋಗಮುಕ್ತ ಭಾರತ ಅಭಿಯಾನ ಉದ್ಘಾಟಿಸಿ ಮಾತನಾಡಿದ ಪ್ರಧಾನಿ, ಜಾಗತಿಕ ಮಟ್ಟದಲ್ಲಿ ಕ್ಷಯರೋಗ ನಿರ್ಮೂಲನೆಗೆ ಕೈಗೊಂಡ ಪ್ರಯತ್ನಗಳು ಯಶಸ್ವಿಯಾಗಿಲ್ಲ. ಗುರಿ ತಲುಪುವ ಸಲುವಾಗಿ ರೋಗಿಗಳ ಜತೆ ವರ್ತಿಸುವ ವಿಧಾನವನ್ನೇ ಬದಲಾಯಸಿಕೊಳ್ಳುವ ಅಗತ್ಯ ಇದೆ. ಕ್ಷಯರೋಗ ತಜ್ಞರು ಹಾಗೂ ಕಾರ್ಯಕರ್ತರು ಈ ನಿಟ್ಟಿನಲ್ಲಿ ಮಹತ್ವದ ಕೊಡುಗೆ ನೀಡಬಹುದು ಎಂದು  ಹೇಳಿದ್ದಾರೆ.

ದೇಶದ ಭವಿಷ್ಯದ ಮೇಲೆ ಪರಿಣಾಮ:  ದೇಶದ ಜನರ ಜೀವನ, ಭವಿಷ್ಯ ಹಾಗೂ ಆರ್ಥಿಕತೆಯ ಮೇಲೆ ಕ್ಷಯರೋಗ ಪರಿಣಾಮ ಬೀರುತ್ತದೆ. ಈ ಸಾಂಕ್ರಾಮಿಕ ರೋಗದಿಂದ ಕೆಟ್ಟ ಪರಿಣಾಮ ಎದುರಿಸುವವರು ಬಡವರು. ರೋಗ ನಿರ್ಮೂಲನೆಗೆ ಕೈಗೊಳ್ಳುವ ಪ್ರತಿ ಕ್ರಮವೂ ನೇರವಾಗಿ ಅವರ ಜೀವನಕ್ಕೆ ಸಂಬಂಧಪಟ್ಟಿದ್ದಾಗಿದೆ ಎಂದು ಅವರು ತಿಳಿಸಿದ್ದಾರೆ.

ರೋಗ ಪತ್ತೆ, ಉತ್ತಮ ಔಷಧ ಹಾಗೂ ಚಿಕಿತ್ಸೆಯ ಆವಿಷ್ಕಾರಕ್ಕಾಗಿ ತಂತ್ರಜ್ಞಾನ ಬಳಸಿಕೊಳ್ಳಲು ಸರ್ಕಾರ ಉತ್ಸುಕವಾಗಿದೆ. ಸಂಶೋಧನೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಕ್ಷಯರೋಗ ಸಂಶೋಧನಾ ಸಂಸ್ಥೆ ರಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯಗಳ ಪಾತ್ರ ಪ್ರಮುಖ: ದೇಶದಲ್ಲಿ ಕ್ಷಯರೋಗ ನಿರ್ಮೂಲನೆಗೊಳಿಸುವಲ್ಲಿ ರಾಜ್ಯಗಳು ಬಹುಮುಖ್ಯ ಪಾತ್ರ ಹೊಂದಿವೆ. ಅಭಿಯಾನದಲ್ಲಿ ಕೈಜೋಡಿಸುವಂತೆ ಎಲ್ಲಾ ರಾಜ್ಯಗಳಿಗೂ ಪತ್ರ ಬರೆಯಲಾಗಿದೆ. ಸಂಬಂಧಿಸಿದ ಯೋಜನೆಗಳಿಗೆ ಬಜೆಟ್‌ನಲ್ಲಿ ನಿರಂತರವಾಗಿ ಅನುದಾನ ಹೆಚ್ಚಿಸಲಾಗುತ್ತಿದೆ. ಕ್ಷಯರೋಗಿಗಳಿಗೆ ಪೌಷ್ಟಿಕ ಆಹಾರ ಒದಗಿಸಲು ವಾರ್ಷಿಕ ₹648.90 ಕೋಟಿ ಅನುದಾನ ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

‘ವಿಧಾನವೇ ಬದಲಾಗಲಿ’
‘ವಿಶ್ವಸಂಸ್ಥೆ 25 ವರ್ಷಗಳ ಹಿಂದೆಯೇ ಕ್ಷಯರೋಗವನ್ನು ಅಪಾಯಕಾರಿ ಎಂದು ಘೋಷಿಸಿದೆ. ಆಗಿನಿಂದಲೂ ಹಲವು ರಾಷ್ಟ್ರಗಳು ಈ ರೋಗ ನಿರ್ಮೂಲನೆಗೆ ಶ್ರಮಿಸುತ್ತವೆ. ಆದರೆ ಇನ್ನೂ ಯಶಸ್ಸು ಸಾಧಿಸಲಾಗಿಲ್ಲ ಎನ್ನುವುದು ವಾಸ್ತವ. 10–20 ವರ್ಷಗಳ ನಂತರವೂ ನಿರೀಕ್ಷಿಸಿದ ಫಲಿತಾಂಶ ದೊರಕದಿದ್ದರೆ, ವಿಷಯವನ್ನು ಪರಿಗಣಿಸುವ ವಿಧಾನವನ್ನೇ ಬದಲಾಯಿಸಿಕೊಳ್ಳಬೇಕು. ಈ ತನಕ ಮಾಡಿದ ಕೆಲಸಗಳನ್ನು ವಿಶ್ಲೇಷಿಸಬೇಕು. ಇದರಿಂದ ಹೊಸ ಮಾರ್ಗಗಳನ್ನು ಕಂಡುಕೊಳ್ಳಲು ಸಾಧ್ಯವಾಗಬಹುದು’ ಎಂದು ಪ್ರಧಾನಿ ಹೇಳಿದ್ದಾರೆ.

ಪ್ರಕರಣ ಪತ್ತೆಗೆ ಪ್ರೋತ್ಸಾಹಧನ
ಚಿಕಿತ್ಸೆಯ ವಲಯದಿಂದ ಹೊರಗೆ ಉಳಿದಿರುವ ಕ್ಷಯರೋಗಿಗಳ ಕುರಿತು ಸರ್ಕಾರಕ್ಕೆ ಮಾಹಿತಿ ನೀಡುವ ಖಾಸಗಿ ವೈದ್ಯರಿಗೆ ಪ್ರತಿ ಪ್ರಕರಣಕ್ಕೆ ₹1,000 ಪ್ರೋತ್ಸಾಹಧನ ನೀಡುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಪ್ರಸ್ತಾವನೆ ಇರಿಸಿದೆ.

ದಾಖಲೆಯಲ್ಲಿ ಇರದ ಕ್ಷಯರೋಗಿಗಳ ಪತ್ತೆಗಾಗಿ ಸ್ಥಳೀಯ ಔಷಧ ಅಂಗಡಿಗಳಿಗೆ ಭೇಟಿ ನೀಡಲು ರಾಜ್ಯ ಸರ್ಕಾರಗಳ ಆರೋಗ್ಯ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ. ಛತ್ತೀಸಗಡದಲ್ಲಿ ಈ ಪ್ರಯೋಗ ಯಶಸ್ವಿಯಾಗಿದೆ. ಅಲ್ಲಿ ಸ್ಥಳೀಯ ಔಷಧ ಅಂಗಡಿಗಳನ್ನು ಸಂಪರ್ಕಿಸುವ ಮೂಲಕವೇ 24 ಸಾವಿರ ಕ್ಷಯರೋಗಿಗಳನ್ನು ಗುರುತಿಸಲಾಗಿದೆ.

**

ಜಾಗತಿಕ ಮಟ್ಟದಲ್ಲಿ 2030ರ ಗುರಿ ಇರಿಸಿಕೊಳ್ಳಲಾಗಿದೆ. ಭಾರತದಲ್ಲಿ 2025ಕ್ಕೇ ಕ್ಷಯರೋಗ ನಿರ್ಮೂಲನ ಮಾಡುವುದಾಗಿ ಘೋಷಿಸಲು ಬಯಸುತ್ತೇನೆ
– ನರೇಂದ್ರ ಮೋದಿ, ಪ್ರಧಾನಿ

Post a Comment

0 Comments