₹ 2.50ಕ್ಕೆ ‘ಸುವಿಧಾ’ ಸ್ಯಾನಿಟರಿ ನ್ಯಾಪ್‌ಕಿನ್

₹ 2.50ಕ್ಕೆ ‘ಸುವಿಧಾ’ ಸ್ಯಾನಿಟರಿ ನ್ಯಾಪ್‌ಕಿನ್

9 Mar, 2018ಪ್ರಜಾವಾಣಿ ವಾರ್ತೆ
ನವದೆಹಲಿ: ಬಡ ಮಹಿಳೆಯರಿಗೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕೊಡುಗೆಯಾಗಿ ಕೇಂದ್ರ ಸರ್ಕಾರವು ಕಡಿಮೆ ದರದಲ್ಲಿ ‘ಸುವಿಧಾ’ ಸ್ಯಾನಿಟರಿ ನ್ಯಾಪ್‌ಕಿನ್ ಮಾರಾಟದ ವ್ಯವಸ್ಥೆ ಮಾಡಿದೆ.

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್ ಹಾಗೂ ರಾಜ್ಯ ಸಚಿವ ಮನಸುಖ್ ಮಾಂಡವಿಯಾ ಅವರು ಬುಧವಾರ ಇಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್‌ ಬಿಡುಗಡೆ ಮಾಡಿದರು.

ಬಡ, ಗ್ರಾಮೀಣ ಮಹಿಳೆಯರಿಗೆ ನೆರವಾಗುವ ನಿಟ್ಟಿನಲ್ಲಿ ‘ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ’ ಕಾರ್ಯಕ್ರಮದಡಿ ಕೇಂದ್ರ ಸರ್ಕಾರದ ಜನೌಷಧಿ ಕೇಂದ್ರಗಳಲ್ಲಿಯೇ ₹ 2.5ಕ್ಕೆ ಒಂದರಂತೆ ಈ ನ್ಯಾಪ್‌ಕಿನ್‌ಗಳನ್ನು ಮಾರಾಟ ಮಾಡಲಾಗುತ್ತದೆ. ಖಾಸಗಿ ಕಂಪನಿಗಳು ಪ್ರತಿ ನ್ಯಾಪ್‌ಕಿನ್‌ಗೆ ಕನಿಷ್ಠ ₹8 ದರ ಆಕರಿಸುತ್ತಿವೆ. ಕೇಂದ್ರವು ಅತ್ಯಂತ ಕಡಿಮೆ ದರದಲ್ಲಿ ಪೂರೈಸಲು ಕ್ರಮ ಕೈಗೊಂಡಿದೆ ಎಂದು ಸಚಿವ ಅನಂತಕುಮಾರ್ ಸುದ್ದಿಗಾರರಿಗೆ ತಿಳಿಸಿದರು.

ಪರಿಸರ ಸ್ನೇಹಿಯಾಗಿರುವ, ಶೇಕಡ100ರಷ್ಟು ಜೈವಿಕವಾಗಿ ವಿಘಟನೆ (ಆಕ್ಸೊ– ಬಯೊಡಿಗ್ರೇಡೆಬಲ್) ಹೊಂದುವಂತಹ ಈ ನ್ಯಾಪ್‌ಕಿನ್‌ಗಳನ್ನು ದೇಶದಾದ್ಯಂತ ಇರುವ 3,200ಕ್ಕೂ ಅಧಿಕ ಜನೌಷಧಿ ಕೇಂದ್ರಗಳಲ್ಲಿ ಮೇ 28ರಿಂದ ಮಾರಾಟ ಮಾಡಲಾಗುವುದು ಎಂದು ಅವರು ತಿಳಿಸಿದರು.

ಕೇಂದ್ರ ಸರ್ಕಾರ ಕಡಿಮೆ ದರದ ಈ ಯೋಜನೆಯಿಂದ ಖಾಸಗಿ ಕಂಪೆನಿಗಳೂ ಸ್ಪರ್ಧಾತ್ಮಕ ದರದಲ್ಲಿ ನ್ಯಾಪ್‌ಕಿನ್‌ ಮಾರಾಟ ಮಾಡಲು ಮುಂದಾಗಬಹುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ನ್ಯಾಪ್‌ಕಿನ್‌ ಬಳಕೆ ಕುರಿತು ಆಯಾ ರಾಜ್ಯ ಸರ್ಕಾರಗಳು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಹಿಳೆಯರಲ್ಲಿ ಜಾಗೃತಿ ಮೂಡಿಸಬೇಕಿದೆ. ಗ್ರಾಮೀಣ ಮಹಿಳೆಯರಿಗೆ ಸುಲಭವಾಗಿ ತಲುಪಿಸುವ ನಿಟ್ಟಿನಲ್ಲಿ ಸಮರ್ಪಕ ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಉಚಿತವಾಗಿ ನ್ಯಾಪ್‌ಕಿನ್‌ ಪೂರೈಕೆಗೆ ಕ್ರಮ ಕೈಗೊಳ್ಳುವ ಕುರಿತು ಸರ್ಕಾರ ಚಿಂತನೆ ನಡೆಸಿದೆ ಎಂದೂ ಅವರು ಹೇಳಿದರು.

Post a Comment

0 Comments